September 6, 2026
Mumbai News Kannada
ಮುಂಬಯಿ

ಮುಂಬಯಿ: ಬಿಲ್ಲವರ ಅಸೋಸಿಯೇಷನ್ ವತಿಯಿಂದ ಸಾಹಿತ್ಯ, ಯಕ್ಷಗಾನ ಪ್ರಶಸ್ತಿ ಪ್ರದಾನ





.

.


ಮುಂಬಯಿ: “ದೈನಂದಿನ ಒತ್ತಡ ಹಾಗೂ ಕ್ರೌರ್ಯದ ಸುದ್ದಿಗಳ ನಡುವೆ ಬದುಕುವ ನಮಗೆ ಸಾಹಿತ್ಯದ ಓದು ಮಾತ್ರ ನೆಮ್ಮದಿ ನೀಡಬಲ್ಲದು. ಇಂದು ನಾನು ಸ್ವೀಕರಿಸಿದ ಈ ಪ್ರಶಸ್ತಿಯನ್ನು ಶ್ರೀ ಗುರುನಾರಾಯಣರ ‘ಸಾಹಿತ್ಯ ಪ್ರಸಾದ’ ಎಂದು ಭಾವಿಸುತ್ತೇನೆ” ಎಂದು ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ನುಡಿದರು.


​ನಗರದ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಶನಿವಾರ ಸಂಜೆ ನಡೆದ ಬಿಲ್ಲವರ ಅಸೋಸಿಯೇಷನ್ ಮುಂಬಯಿ ಆಯೋಜಿತ 2025ರ ಸಾಲಿನ ‘ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಸಾಂಸ್ಕೃತಿಕ ಉಪಸಮಿತಿಯ ಆಶ್ರಯದಲ್ಲಿ ಜರುಗಿದ ಈ ಸಮಾರಂಭದಲ್ಲಿ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಅವರಿಗೆ ‘ಶ್ರೀ ಗುರುನಾರಾಯಣ ಯಕ್ಷಗಾನ ಕಲಾ ಪ್ರಶಸ್ತಿ’ ಘೋಷಿಸಲಾಯಿತಾದರೂ, ಅನಿವಾರ್ಯ ಕಾರಣಗಳಿಂದ ಅವರು ಸಮಾರಂಭಕ್ಕೆ ಗೈರಾಗಿದ್ದರು.


​ಸಾಹಿತ್ಯವು ಕತ್ತಲ ಅಳಿಸಿ ಬೆಳಕು ಅರಸುವ ಕಾರ್ಯ: ಜೋಕಟ್ಟೆ


​ತಮ್ಮ ಅನಿಸಿಕೆ ಹಂಚಿಕೊಂಡ ಜೋಕಟ್ಟೆ ಅವರು, “ನನ್ನ ಸಾಹಿತ್ಯ ಕೃಷಿ ಮತ್ತು ಬದುಕಿನ ಹಾದಿಯಲ್ಲಿ ಬಿಲ್ಲವ ಸಮಾಜದ ಸಹಕಾರ ಅಪಾರವಾಗಿದೆ. ‘ಅಕ್ಷಯ’ ಮಾಸಿಕವು ಮುಂಬಯಿಯ ಸಾಹಿತ್ಯ ಲೋಕದ ಪ್ರಮುಖ ಕೊಂಡಿ. ಕತ್ತಲನ್ನು ಅಳಿಸಿ ಬೆಳಕನ್ನು ಅರಸುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ. ಅಂತಹ ಬೆಳಕು ಅಸೋಸಿಯೇಷನ್‌ನ ಸಮಾಜಪರ ಕೆಲಸಗಳಲ್ಲಿಯೂ ಕಾಣಿಸುತ್ತಿದೆ,” ಎಂದರು.


​ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಕೃತ ವಿದ್ವಾಂಸ ಡಾ. ಎಸ್. ಕೆ. ಭವಾನಿ ಮಾತನಾಡಿ, “ಜೋಕಟ್ಟೆ ಅವರು ಕೇವಲ ಪತ್ರಕರ್ತರಲ್ಲ, 47 ಕೃತಿಗಳನ್ನು ರಚಿಸಿದ ಸತ್ವಶಾಲಿ ಸಾಹಿತಿ. ಸಾಹಿತ್ಯವು ಮನುಷ್ಯನನ್ನು ಪಶುತ್ವದಿಂದ ಮಾನವತ್ವದೆಡೆಗೆ ಕೊಂಡೊಯ್ಯುತ್ತದೆ. ದೇಶ-ವಿದೇಶ ಸುತ್ತಿ ಅನುಭವ ಹಂಚಿಕೊಂಡಿರುವ ಇವರ ಸಾಹಿತ್ಯ ಕೃಷಿ ಶ್ಲಾಘನೀಯ,” ಎಂದು ಹಾರೈಸಿದರು.


​ಗೌರವ ಅತಿಥಿಯಾಗಿದ್ದ ಮುಂಬಯಿ ಬಂಟ್ಸ್ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ ಮಾತನಾಡಿ, “ಮುಂಬಯಿಯಂತಹ ಮಹಾನಗರದಲ್ಲಿ ನಮ್ಮ ಸಂಸ್ಕೃತಿ, ಭಾಷೆ ಉಳಿದಿದ್ದರೆ ಅದು ಸಾಹಿತಿಗಳು ಮತ್ತು ಕಲಾವಿದರಿಂದ ಮಾತ್ರ ಸಾಧ್ಯ. ಜೋಕಟ್ಟೆ ಅವರು ಎರಡು ದಶಕಗಳ ಹಿಂದೆ ಮಾಡಿದ ಸಂದರ್ಶನ ನನ್ನ ಯಶಸ್ಸಿನ ಪಯಣಕ್ಕೆ ನಾಂದಿ ಹಾಡಿತ್ತು,” ಎಂದು ಸ್ಮರಿಸಿದರು.


ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಜಿ. ಅಮೀನ್ ಮಾತನಾಡಿ, “ಸಂಸ್ಥೆಯು ಜಾತಿ-ಮತ ಭೇದವಿಲ್ಲದೆ ಅರ್ಹ ಪ್ರತಿಭೆಗಳನ್ನು ಗುರುತಿಸುತ್ತಿದೆ. ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸುವ ಸವಾಲನ್ನು ನಾವು ಸ್ವೀಕರಿಸಿದ್ದು, ಇದಕ್ಕೆ ಸಮಾಜ ಬಾಂಧವರ ಸಹಕಾರ ಅಗತ್ಯ,” ಎಂದು ಕರೆ ನೀಡಿದರು.


​ವೇದಿಕೆಯಲ್ಲಿ ಪ್ರಶಸ್ತಿ ಪ್ರಾಯೋಜಕರಾದ ಉದ್ಯಮಿ ವಿನಯ್ ಎಂ. ಕುಕ್ಯಾನ್, ಭಾರತ್ ಬ್ಯಾಂಕಿನ ನಿರ್ದೇಶಕ ಎಂ.ಎನ್. ಕರ್ಕೆರ ಉಪಸ್ಥಿತರಿದ್ದರು. ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್ ಪ್ರಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ‘ಅಕ್ಷಯ’ ಮಾಸಪತ್ರಿಕೆಯ ಮುಖ್ಯ ಸಂಪಾದಕ ಡಾ. ಈಶ್ವರ ಅಲೆವೂರು ಪ್ರಶಸ್ತಿಯ ಆಶಯ ವಿವರಿಸಿದರು. ಹರೀಶ್ ಹೆಜ್ಜಾಡಿ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು.


​ಅಸೋಸಿಯೇಷನ್‌ನ ಉಪಾಧ್ಯಕ್ಷರಾದ ಪುರುಷೋತ್ತಮ ಎಸ್. ಕೋಟ್ಯಾನ್, ಮೋಹನ್ ಸಿ. ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಕೋಶಾಧಿಕಾರಿ ರವಿ ಎಸ್. ಸನಿಲ್, ಸಾಂಸ್ಕೃತಿಕ ಉಪಸಮಿತಿ ಕಾರ್ಯಾಧ್ಯಕ್ಷ ನವೀನ್ ಪಡು ಇನ್ನಾ ಗೌರವ ಕಾರ್ಯದರ್ಶಿ ಜಿ. ಕೆ. ಕೆಂಚನಕೆರೆ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


​ಕಾರ್ಯಕ್ರಮದ ಆರಂಭದಲ್ಲಿ ಮಹಿಳಾ ವಿಭಾಗದಿಂದ ‘ನೃತ್ಯ ವೈಭವ’ ಪ್ರದರ್ಶನಗೊಂಡಿತು.ಅತಿಥಿಗಳನ್ನು ಪರಿಚಯಿಸಿದ ಕುಸುಮಾ ಅಮೀನ್ ಮತ್ತು ವಿಶ್ವನಾಥ್ ತೋನ್ಸೆ ಅವರೊಂದಿಗೆ ಹರೀಶ್ ಜಿ. ಪೂಜಾರಿ ಕೊಕ್ಕರ್ಣೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ವರದಿ: ಇನ್ನಂಜೆ ಜಯರಾಮ್




Related posts

ಕುಲಾಲ ಸಂಘ ಮುಂಬಯಿ  ಇದರ 2024-26 ರ ಸಾಲಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ

Mumbai News Desk

ಮಲಾಡ್ ಪೂರ್ವ: ಸ್ವಾಮಿ ಕೊರಗಜ್ಜ ನೇಮೋತ್ಸವ

Mumbai News Desk

ಪದ್ಮನಾಭ ಕಟೀಲುರವರು ಆಯೋಜನೆಯಲ್ಲಿ  ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 25ನೇ ಸಂಸ್ಮಯಣೆಯಲಿ ಗಲ್ಫ್ ರಾಷ್ಟ್ರದ ಸಾಧಕರಿಗೆ ಗೌರವಾರ್ಥನೆ

Mumbai News Desk

ಬಿಲ್ಲವರ ಎಸೋಸಿಯೇಶನ್‌ನಿಂದ ‘ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ’ಗೆ ಚಾಲನೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಶ್ರೀಶ ಕುಶಾಲಪ್ಪ ಮೂಲ್ಯ ಗೆ ಶೇ 93.60 ಅಂಕ.

Mumbai News Desk

ಮುಂಬೈ: ಬೋರಿವಲಿ ಶ್ರೀ ಜಗದೇಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶ ಸಂಭ್ರಮ ಸಂಪನ್ನ

Mumbai News Desk