September 1, 2026
Mumbai News Kannada
ಮುಂಬಯಿ

ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆಯ 8ನೇಯ ಪ್ರಸ್ತುತಿ, ಸನ್ಮಾನ






ಶ್ರೀರಾಮನ ಆದರ್ಶಗಳು ಮನೆ-ಮನಗಳನ್ನು ತಲುಪಲಿ :
ವೇ| ಮೂ| ಪೆರ್ಣoಕಿಲ ಹರಿದಾಸ್ ಭಟ್

” ಮನೆ ಮನೆಯಲ್ಲೂ ರಾಮ, ಮನ ಮನದಲ್ಲೂ ರಾಮ ಎನ್ನುವ ಒಂದು ಉತ್ತಮ ಕೈಂಕರ್ಯದ ಸಂಕಲ್ಪ ಇಲ್ಲಿ ಆಯೋಜಕರು ಮಾಡಿದ್ದಾರೆ. ಅದನ್ನು ಮನೆಯಿಂದ ಆರಂಭಿಸಲು ಮನೆಯಲ್ಲಿರುವ ಹಿರಿಯರು ಮನೆಯ ಮಕ್ಕಳಿಗೆ ಕಥಾ ರೂಪದಲ್ಲಿ ಹೇಳುವ ಪರಿಪಾಠ ಬೆಳೆಸಬೇಕು. ಹಿಂದೆ ಮನೆಯಲ್ಲಿ ಅಜ್ಜಿ ಮೊಮ್ಮಕ್ಕಳಿಗೆ ಕಥೆ ಹೇಳುತ್ತಾ ನಮ್ಮ ದೈವಿಕ ಪರಂಪರೆ ಹಾಗೂ ಪುರಾಣಗಳ ಕಥೆಯನ್ನು ತಿಳಿಸುತ್ತಾ ಮಕ್ಕಳಲ್ಲಿ ಸುಜ್ಞಾನದ ಸಂಸ್ಕಾರವನ್ನು ಮೊಳಕೆ ಹೊಡೆಯಲು ಕಾರಣವಾಗುತ್ತಿದ್ದರು. ಈಗ ಅಜ್ಜ – ಅಜ್ಜಿ ಮನೆಯಲ್ಲಿ ಇದ್ದರೂ ಕೂಡ ಟಿವಿ ಧಾರಾವಾಹಿಗಳನ್ನು ನೋಡುವುದರಲ್ಲಿ ತಲ್ಲಿನರಾಗಿರುತ್ತಾರೆ, ಅದು ತಪ್ಪು ಅಂತ ಹೇಳಲಾರೆ, ಕಾಲದೊಂದಿಗೆ ನಾವು ಹೋಗುತ್ತಿದ್ದೇವೆ, ಆದರೆ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯ ಅರಿವು ಮೂಡಿಸುವ ಅಗತ್ಯವಿದೆ ಎಂದು ವಿದ್ಯಾವಿಹಾರ್ ಗಾಂವ್ದೇವಿ ಶ್ರೀ ಅಂಬಿಕಾ ಆದಿನಾಥೆಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಪೆರ್ಣoಕಿಲ ಹರಿದಾಸ್ ಭಟ್ ನುಡಿದರು.


ಅವರು ಮೇ 24ರಂದು, ವಿದ್ಯಾವಿಹಾರ್ ಗಾಂವ್ದೇವಿ ಶ್ರೀ ಅಂಬಿಕಾ ಆದಿನಾಥೆಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ವತಿಯಿಂದ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಆಯೋಜನೆಯಲ್ಲಿ ಶ್ರೀರಾಮ ಕಥಾ ಹೃದಯಂ ಸರಣಿ ತಾಳ ಮದ್ದಳೆಯ ಎಂಟನೆಯ ಪ್ರಸ್ತುತಿ,”ಶ್ರೀ ರಾಮ ಕಾರುಣ್ಯ” ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಾಪಲ್ಯ ಸೇವಾ ಸಂಘ ಮುಂಬೈ ಅಧ್ಯಕ್ಷ ಶ್ರೀನಿವಾಸ ಸಾಪಲ್ಯ ಮಾತನಾಡುತ್ತಾ ” ಭಾರತೀಯ ಮಹಾಕಾವ್ಯಗಳು ಈ ದೇಶದ ಅಸ್ಮಿತೆ, ಆ ಕಾವ್ಯದ ಪಾತ್ರಗಳು ಬೋಧಿಸುವ ಜೀವನದರ್ಶ ಸದಾ ಅನುಸರಣೀಯ.ನಮ್ಮವರೇ ಆಗಲಿ, ಎಷ್ಟು ಪ್ರಬಲರೇ ಆಗಲಿ ಅವರಿಂದ ತಪ್ಪು ಘಟಿಸಿದಾಗ ಪ್ರತಿಭಟಿಸಿ ಧರ್ಮದ ಪರವಾಗಿ ನಿಲ್ಲುವುದರಿಂದ ನಮಗೆ ಪ್ರಾಪ್ತಿಯಾಗಬಹುದಾದ ಶ್ರೇಷ್ಠತೆ ಜೇಷ್ಠತೆಗೆ ವಿಭಿಷಣ ಹಾಗೂ ವಿಧುರನಂತಹ ಪಾತ್ರಗಳು ಕೈಗನ್ನಡಿಯಾಗಿದೆ. ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಸಂಘಟಿಸಿರುವ ಶ್ರೀ ರಾಮಕಥಾ ಹೃದಯಂ ಎಂಬ ಸರಣಿ ತಾಳಮದ್ದಳೆ ಕಾರ್ಯಕ್ರಮ ಕೇವಲ ಒಂದು ಕಾರ್ಯಕ್ರಮ ಅಲ್ಲ ಇದೊಂದು ಯಜ್ಞ ಸದೃಶವಾದ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂಲಕ ರಾಮಾಯಣದ ಆದರ್ಶಗಳು ಮನೆ – ಮನಗಳನ್ನು ತಲುಪಲಿ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಲಿ ಎಂದರು.


ಇನ್ನೋರ್ವ ಅತಿಥಿ ಬಾಂಬೆ ಬಂಟ್ಸ್ ಸಂಘದ ನಿಕಟ ಪೂರ್ವ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ ತಮ್ಮ ಅನಿಸಿಕೆ ತಿಳಿಸುತ್ತಾ ” ಇದೊಂದು ಅಪೂರ್ವ ಕಾರ್ಯಕ್ರಮವಾಗಿದೆ. ನಾವೆಲ್ಲರೂ ಈ ಮಹತ್ವದ ಕಾರ್ಯಕ್ರಮದಲ್ಲಿ ತೊಡಗಿಸಿ ಕೊಂಡಾಗ ಶ್ರೀರಾಮದೇವರ ಸೇವೆ ಮಾಡುವ ಅವಕಾಶ ನಮಗೆ ಲಭಿಸುತ್ತದೆ. ಅರ್ಥಪೂರ್ಣ ಸರಣಿ ಕಾರ್ಯಕ್ರಮಕ್ಕೆ ಕೈಜೋಡಿಸುವುದು ಮಾನವ ಧರ್ಮ, ಕಾರ್ಯಕ್ರಮದ ಆಯೋಜಕರಾದ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ಕಾರ್ಯ ಶ್ಲಾಘನೀಯ. ಮತ್ತು ಇದಕ್ಕೆ ಬೆನ್ನೆಲುಬಾಗಿ ನಿಂತಿರುವ ಪೆರ್ಣoಕಿಲ ಹರಿದಾಸ್ ಭಟ್ ಅವರು ಅಭಿನಂದನಾರ್ಹರು, ಕಲೆ ಕಲಾವಿದರನ್ನು ಪೋಷಿಸುವುದರೊಂದಿಗೆ ಯುವ ಪೀಳಿಗೆಯಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವದನ್ನು ಕಂಡಾಗ ಸಂತೋಷವಾಗುತ್ತದೆ, ಕಲಾವಿದರನ್ನು ಗುರುತಿಸುವ ಕಾರ್ಯ ಮುಂದುವರಿಯಲಿ ಎಂದರು.
ಖ್ಯಾತ ಭಾಗವತ,ನಾದಲೋಲ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರು ಮಾತನಾಡಿ ಇದೊಂದು ಸ್ಮರಣೀಯ ಕಾರ್ಯಕ್ರಮವಾಗಿದೆ ಎಂದು ನುಡಿದು ಶುಭ ಹಾರೈಸಿದರು.


ಈ ಸಂದರ್ಭ ಹಿರಿಯ ಭಾಗವತರಾದ ರವೀಂದ್ರ ಉಚ್ಚಿಲ್ ದಂಪತಿಯನ್ನು ಶಾಲು, ಫಲಪುಷ್ಪ ಸ್ಮರಣೆಕೆ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ರವೀಂದ್ರ ಉಚ್ಚಿಲ್ ಅಭಿಪ್ರಾಯ ತಿಳಿಸುತ್ತ ತಮ್ಮ ಕಲಾ ಜೀವನದ ನೆನಪುಗಳನ್ನು ಮೆಲುಕು ಹಾಕಿ ಸಹಕರಿಸಿದ ಸರ್ವರಿಗೂ ವಂದಿಸಿದರು.
ಗಾಂವ್ದೇವಿ ಶ್ರೀ ಅಂಬಿಕಾ ಆದಿನಾಥೆಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿದಾಸ ಗೋಪಾಲ ಶೆಟ್ಟಿ ಅವರು ಉಪಸ್ಥಿತರಿದ್ದರು.
ಲಕ್ಷ್ಮಿ ಹೇರೂರು ಕಾರ್ಯಕ್ರಮ ನಿರ್ವಹಿಸಿದರೆ, ಹೆಸರಾಂತ ಯಕ್ಷಗಾನ ಕಲಾವಿದ ವಾಸುದೇವ ಮಾರ್ನಾಡ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.
ಬಳಿಕ ನಡೆದ ತಾಳ ಮದ್ದಳೆಯಲ್ಲಿ ಭಾಗವತರಾಗಿ ಜಯಲಕ್ಷ್ಮಿ ದೇವಾಡಿಗ, ರವೀಂದ್ರ ಉಚ್ಚಿಲ್, ಮೋಹನ್ದಾಸ್ ರೈ,ಮದ್ದಳೆಯಲ್ಲಿ ಹರೀಶ್ ನಾರಾಯಣ ಸಾಲಿಯನ್, ಚೆಂಡೆಯಲ್ಲಿ ಪ್ರವೀಣ್ ಶೆಟ್ಟಿ ಕಟೀಲು, ನಿಶಿತ್ ಸುವರ್ಣ, ಹಾಗೂ ಕಲಾವಿದರುಗಳಾಗಿ ಗೀತಾ ಆರ್ ಎಲ್ ಭಟ್,, ಸದಾನಂದ ಶೆಟ್ಟಿ ಮಾನಾಡಿ, ಹರೀಶ್ ಶೆಟ್ಟಿಗಾರ್, ಸುರೇಶ್ ಶೆಟ್ಟಿ ನಂದ್ರೋಳ್ಳಿ, ಶೇಖರ್ ಶೆಟ್ಟಿ, ಸಿಎ ಸುರೇಂದ್ರ ಕೆ ಶೆಟ್ಟಿ, ರಾಘವೇಂದ್ರ ಬಗ್ವಾಡಿ, ವಾಸುದೇವ ಮಾರ್ನಾಡ್, ಸುಜಾತಾಶೆಟ್ಟಿ, ಮಾನಸ್ ಶೆಟ್ಟಿ ಅವರು ಪಾಲ್ಗೊಂಡಿದ್ದರು.
ಪ್ರಾರಂಭದಲ್ಲಿ ಶ್ರಿವತ್ಸ ಹರಿದಾಸ್ ಭಟ್ ಅವರಿಂದ ಪ್ರಸ್ತುತಗೊಂಡ ಶ್ರೀ ರಾಮ ಸಂಕೀರ್ತನೆ ಸೇರಿದ್ದ ಎಲ್ಲರನ್ನು ಮನಸೂರೆಗೊಂಡಿತು.
ರಾಮಾಯಣದ ಆದರ್ಶಗಳು ಹಾಗೂ ಭಾರತೀಯ ಮಹಾಕಾವ್ಯಗಳು ಬೋಧಿಸುವ ಜೀವನದರ್ಶನಗಳು ಪ್ರತಿಯೊಬ್ಬರ ಮನೆ ಮತ್ತು ಮನಗಳನ್ನು ತಲುಪಬೇಕು ಎಂಬ ಆಶಯದೊಂದಿಗೆ, ಕಲೆ ಮತ್ತು ಕಲಾವಿದರನ್ನು ಪೋಷಿಸುವ ಈ ಅರ್ಥಪೂರ್ಣ ಕಾರ್ಯಕ್ರಮವು ನೆರೆದಿದ್ದ ಸರ್ವರ ಪ್ರಶಂಸೆಗೆ ಪಾತ್ರವಾಯಿತು. ಹಿರಿಯ ಕಲಾವಿದರ ಗೌರವಿಸುವಿಕೆ ಮತ್ತು ಯುವ ಕಲಾವಿದರ ಸಂಕೀರ್ತನೆ ಸೇವೆ ಈ ಸಮಾರಂಭಕ್ಕೆ ಮತ್ತಷ್ಟು ಮೌಲ್ಯವನ್ನು ತಂದುಕೊಟ್ಟಿತು.



Related posts

ಕುಂದರ್ ಮೂಲಸ್ಥಾನ ಸಭಾ ಮುಂಬಯಿ : ವಾರ್ಷಿಕ ವಿಹಾರ ಕೂಟ ಮತ್ತು ಪ್ರತಿಭಾ ಪುರಸ್ಕಾರ

Mumbai News Desk

ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಮೀರಾ-ಭಾಯಂದರ್ ವತಿಯಿಂದ ಬಿ.ಎಸ್. ಕುರ್ಕಾಲ್ ದತ್ತಿನಿಧಿ ಪ್ರಶಸ್ತಿ ಪ್ರಧಾನ

Mumbai News Desk

ಡೊಂಬಿವಲಿ ಶ್ರೀ ಮಹಾವಿಷ್ಣು ಮಂದಿರದ ವತಿಯಿಂದ ‘ಆಟಿಡೊಂಜಿ ದಿನ’ ಆಚರಣೆ

Mumbai News Desk

ಬಂಟರ ಸಂಘ, ಮುಂಬಯಿ, ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಮಹಿಳಾ‌ ವಿಭಾಗ- ಆಟಿದ ಪೊರ್ಲ್ ತಿರ್ಲ್ ಕಾರ್ಯಕ್ರಮ

Mumbai News Desk

ಬೃಹನ್ಮುಂಬೈ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 188ರಲ್ಲಿ ಭಾಸ್ಕರ್ ಆರ್ ಶೆಟ್ಟಿ ವಿಜಯ

Mumbai News Desk

ರಾವಲ್‌ಪಾಡ ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನದ 40ನೇ ವಾರ್ಷಿಕ ಮಹಾಪೂಜೆ ಸಂಪನ್ನ

Mumbai News Desk