ಡೊಂಬಿವಲಿ: ಶ್ರೀ ರಜಕ ಸಂಘ, ಡೊಂಬಿವಿಲಿ ಪ್ರಾದೇಶಿಕ ವಲಯದ ವತಿಯಿಂದ 02-08-2026 ರಂದು ವಲಯದ ಕಚೇರಿಯಲ್ಲಿ ಶ್ರೀ ಗುರು ಪೂಜಾ ಕಾರ್ಯಕ್ರಮ ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದ ಆರಂಭದಲ್ಲಿ ವಲಯದ ಸದಸ್ಯರಿಂದ ಭಜನೆ ನಡೆಯಿತು. ಬಳಿಕ ವಲಯದ ಅಧ್ಯಕ್ಷರಾದ ಶ್ರೀ ಜಯರಾಜ್ ಬಂಗೇರ ಅವರು ಆಗಮಿಸಿದ ಗಣ್ಯ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ರಜಕ ಸಂಘ ಮುಂಬೈ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಸಾಲ್ಯಾನ್, ಮುಖ್ಯ ಕಾರ್ಯದರ್ಶಿಯಾದ ಶ್ರೀ ಉಮೇಶ್ ಸಾಲ್ಯಾನ್, ಶ್ರೀ ಗುರು ಮಾಚಿದೇವ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಉಷಾ ಸಾಲ್ಯಾನ್, ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಸತೀಶ್ ಸಾಲ್ಯಾನ್, ವಲಯದ ಅಧ್ಯಕ್ಷರಾದ ಶ್ರೀ ಜಯರಾಜ್ ಬಂಗೇರ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಗೀತಾ ಕುಂದರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಂತರ ಅಧ್ಯಕ್ಷರು ಹಾಗೂ ಗಣ್ಯ ಅತಿಥಿಗಳು ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಲಯದ ಸದಸ್ಯೆಯರಾದ ಶ್ರೀಮತಿ ಉಷಾ ಸಾಲ್ಯಾನ್ ಹಾಗೂ ಶ್ರೀಮತಿ ಶಾಂತಿ ಹರೀಶ್ ಅವರು ಪ್ರಾರ್ಥನೆ ನಡೆಸಿಕೊಟ್ಟರು.
ಇದಾದ ಬಳಿಕ ನಮ್ಮನ್ನು ಅಗಲಿದ ಸಮಾಜದ ಬಂಧುಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ವಲಯದ ಮಹಿಳಾ ಉಪಾಧ್ಯಕ್ಷರಾದ ಶ್ರೀಮತಿ ಉಷಾ ಎನ್. ಸಾಲ್ಯಾನ್ ಅವರು ಗುರು ಮಡಿವಾಳ ಮಾಚಿದೇವರ ಮಹಿಮೆ, ಅವರ ಆದರ್ಶ ಜೀವನ ಹಾಗೂ ವಚನಗಳ ಮಹತ್ವವನ್ನು ಸಭಿಕರಿಗೆ ಮನಮುಟ್ಟುವ ರೀತಿಯಲ್ಲಿ ವಿವರಿಸಿದರು.
ಅನಂತರ ವಲಯದ ಹಿರಿಯ ಸದಸ್ಯರಾದ ಮೂರು ದಂಪತಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಹಿರಿಯರು ತಮ್ಮ ಅನುಭವಗಳನ್ನು ಹಂಚಿಕೊಂಡು, ಸಂಘದ ಮೇಲಿನ ತಮ್ಮ ಅಭಿಮಾನ ಮತ್ತು ಒಲವನ್ನು ವ್ಯಕ್ತಪಡಿಸಿದರು.
ಮುಖ್ಯ ಕಾರ್ಯದರ್ಶಿಯಾದ ಶ್ರೀ ಉಮೇಶ್ ಸಾಲ್ಯಾನ್ ಅವರು ಮಾತನಾಡಿ, “ಡೊಂಬಿವಿಲಿ ವಲಯವು ಈ ವರ್ಷದ ತನ್ನ ಮೊದಲ ಕಾರ್ಯಕ್ರಮವನ್ನು ಶ್ರೀ ಗುರುದೇವರ ಅನುಗ್ರಹದೊಂದಿಗೆ ಆರಂಭಿಸಿರುವುದು ಸಂತಸದ ವಿಷಯ” ಎಂದು ತಿಳಿಸಿದರು.
ಶ್ರೀ ಗುರು ಮಾಚಿದೇವ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಉಷಾ ಸಾಲ್ಯಾನ್ ಅವರು ಗುರು ಮಾಚಿದೇವರ ವಚನಗಳ ಸಾರವನ್ನು ವಿವರಿಸುತ್ತಾ, “ಕಾಯಕವೇ ಕೈಲಾಸ”, ಶ್ರಮದ ಮಹತ್ವ ಹಾಗೂ ಒಗ್ಗಟ್ಟಿನ ಬಲ ಜೀವನದಲ್ಲಿ ಯಶಸ್ಸು ಸಾಧಿಸಲು ದಾರಿದೀಪವಾಗಿವೆ ಎಂದು ತಿಳಿಸಿದರು.
ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಸತೀಶ್ ಸಾಲ್ಯಾನ್ ಅವರು ಮಾತನಾಡಿ, “ನಮಗೆ ನಾವೇ ಗುರು” ಎಂಬ ಸಂದೇಶವನ್ನು ಸಾರುತ್ತಾ, ನಾವು ನಮ್ಮನ್ನು ತಾವೇ ಅರಿತು ಶಿಸ್ತು, ವಿನಯ ಹಾಗೂ ಸತ್ಕಾರ್ಯಗಳ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಯಶಸ್ಸು ಖಚಿತ ಎಂದು ತಿಳಿಸಿದರು. ಶಿಲ್ಪಿಯ ಕೈಯಲ್ಲಿ ಕಲ್ಲು ಸುಂದರ ಶಿಲ್ಪವಾಗುವಂತೆ, ಪ್ರತಿಯೊಬ್ಬರೂ ತಮ್ಮ ವ್ಯಕ್ತಿತ್ವವನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಲಯದ ಅಧ್ಯಕ್ಷರಾದ ಶ್ರೀ ಜಯರಾಜ್ ಬಂಗೇರ ಅವರು ಆಗಮಿಸಿದ ಎಲ್ಲಾ ಗಣ್ಯ ಅತಿಥಿಗಳು ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಡೊಂಬಿವಿಲಿ ವಲಯದ ಮೊದಲ ಕಾರ್ಯಕ್ರಮವು ಶ್ರೀ ಗುರು ಪೂಜೆಯೊಂದಿಗೆ ಆರಂಭವಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಕಡಿಮೆ ಸಮಯದ ಸಿದ್ಧತೆ ಹಾಗೂ ಸ್ಥಳದ ಅಭಾವವಿದ್ದರೂ, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಹಾಗೂ ಸದಸ್ಯರ ಸಹಕಾರದಿಂದ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.
ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಗೀತಾ ಕುಂದರ್ ಅವರು ಆಗಮಿಸಿದ ಅತಿಥಿಗಳನ್ನು ಅಭಿನಂದಿಸಿ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ವಲಯದ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಹಾಗೂ ಎಲ್ಲ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಶ್ರೀ ರಜಕ ಸಂಘ ಮುಂಬೈ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಸಾಲ್ಯಾನ್ ಅವರು ಸಂಘದ ಮುಂಬರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಜೊತೆಗೆ ಡೊಂಬಿವಿಲಿ ವಲಯದ ಕಾರ್ಯಕ್ಷಮತೆ, ಸಂಘಟನೆ ಹಾಗೂ ಸದಸ್ಯರ ಒಗ್ಗಟ್ಟನ್ನು ಶ್ಲಾಘಿಸಿ, ಮುಂದೆಯೂ ಇದೇ ರೀತಿಯ ಸಹಕಾರ ಮತ್ತು ಸೇವಾ ಮನೋಭಾವದಿಂದ ಸಂಘದ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಪ್ರಮುಖ ಅಂಗವಾದ ಗುರು ಭಜನೋತ್ಸವ, ಅರ್ಚನೆ ಹಾಗೂ ಮಂಗಳಾರತಿಯು ಎಲ್ಲಾ ಸದಸ್ಯರ ಭಕ್ತಿಪೂರ್ವಕ ಭಾಗವಹಿಸುವಿಕೆಯಿಂದ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ಅಂತಿಮವಾಗಿ ಮಹಾ ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮವನ್ನು ವಲಯದ ಮಹಿಳಾ ಕಾರ್ಯದರ್ಶಿಯಾದ ಶ್ರೀಮತಿ ಶಾಂತಿ ಹರೀಶ್ ಅವರು ಅಚ್ಚುಕಟ್ಟಾಗಿ ನಿರೂಪಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು. ಅವರ ಸಮರ್ಥ ನಿರೂಪಣೆಯು ಕಾರ್ಯಕ್ರಮದ ಯಶಸ್ಸಿಗೆ ಮತ್ತಷ್ಟು ಮೆರುಗು ನೀಡಿತು.




