
ಮುಂಬೈ ಉಪನಗರಗಳು, ಥಾಣೆ, ನವಿ ಮುಂಬೈ ಮತ್ತು ಕೊಂಕಣ ಪ್ರದೇಶದಲ್ಲಿ ಮುಂಗಾರು ಮಳೆ ಭಾರಿ ರೌದ್ರಾವತಾರ ತಾಳಿದ್ದು, ಸಾಮಾನ್ಯ ಜನಜೀವನ ಸಂಪೂರ್ಣವಾಗಿ ತಲ್ಲಣಗೊಂಡಿದೆ. ಭಾರತೀಯ ಹವಾಮಾನ ಇಲಾಖೆಯು (IMD) ಮುಂಬೈ, ಥಾಣೆ, ಪಾಲ್ಘರ್ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದೆ. ದೀರ್ಘಕಾಲದ ಕಾಯುವಿಕೆಯ ನಂತರ ಆಗಮಿಸಿದ ಮಳೆಯು ಜನರಿಗೆ ತಂಪೆರೆಯುವ ಬದಲು ಸಾಲು ಸಾಲು ಅವಾಂತರಗಳನ್ನು ಸೃಷ್ಟಿಸಿದೆ. ಧೋ ಎಂದು ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ಮರಗಳು ಉರುಳಿಬಿದ್ದು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ. ರಸ್ತೆಗಳು ಸಂಪೂರ್ಣವಾಗಿ ಹಾಳಾಗಿರುವುದರಿಂದ ಹಾಗೂ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿರುವುದರಿಂದ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಥಾಣೆ ಜಿಲ್ಲೆಯ ಡೊಂಬಿವಿಲಿಯ ಶಿಲ್ಫಾಟಾ-ಭಾರತ್ ಗೇರ್ಸ್ ರಸ್ತೆಯಲ್ಲಿ ಮಂಡಿಯುದ್ದ ನೀರು ನಿಂತಿದ್ದರಿಂದ ವಾಹನಗಳು ಅರ್ಧದಷ್ಟು ಮುಳುಗಡೆಯಾಗಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇತ್ತ ಭಿವಂಡಿಯ ಮುಂಬೈ-ನಾಸಿಕ್ ಹೆದ್ದಾರಿಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಸುಮಾರು 5 ರಿಂದ 7 ಕಿಲೋಮೀಟರ್‌ಗಳವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ಪ್ರಯಾಣಿಕರು ಮೂರರಿಂದ ನಾಲ್ಕು ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡುವಂತಾಯಿತು. ಅಂಧೇರಿ ಸಬ್‌ವೇ ಐದು ಅಡಿಗಳಷ್ಟು ನೀರಿನಿಂದ ಮುಳುಗಡೆಯಾಗಿದ್ದು, ಭದ್ರತೆಯ ದೃಷ್ಟಿಯಿಂದ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಯನ್-ಪನ್ವೇಲ್ ಹೆದ್ದಾರಿಯಲ್ಲೂ ಭಾರಿ ಪ್ರಮಾಣದ ನೀರು ನಿಂತಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಡೊಂಬಿವ್ಲಿ ಎಂಐಡಿಸಿ ಪ್ರದೇಶದಲ್ಲಿ ಮನೆಯೊಂದರ ಮೇಲೆ ಬೃಹತ್ ಮಾವಿನ ಮರ ಉರುಳಿ ಬಿದ್ದಿದೆಯಾದರೂ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ನವಿ ಮುಂಬೈನ ನೆರೂಲ್ ಪ್ರದೇಶದ ಎಲ್.ಪಿ. ಸೇತುವೆಯ ಕೆಳಗೆ ಭಾರಿ ಮಳೆಯ ನಡುವೆ ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್ ಆಗಿ, ರಸ್ತೆಯಲ್ಲಿ ನಿಂತಿದ್ದ ನೀರಿಗೆ ವಿದ್ಯುತ್ ಪ್ರವಹಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ನೀರಿನ ಸಂಪರ್ಕಕ್ಕೆ ಬಂದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯರು ತಕ್ಷಣವೇ ಅವರನ್ನು ಡಿ.ವೈ. ಪಾಟೀಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೊಂದೆಡೆ, ವಸಾಯಿ ಪೂರ್ವದಲ್ಲಿ ವೇಗವಾಗಿ ಹರಿಯುತ್ತಿದ್ದ ನೀರಿನ ರಭಸಕ್ಕೆ ಕಾರೊಂದು ಕೊಚ್ಚಿ ಹೋಗಿದ್ದು, ಚಾಲಕ ಸಮಯಪ್ರಜ್ಞೆಯಿಂದ ಕಾರಿನಿಂದ ಹೊರಗೆ ಜಿಗಿದು ಜೀವ ಉಳಿಸಿಕೊಂಡಿದ್ದಾನೆ. ನಿರಂತರ ಮಳೆಯಿಂದಾಗಿ ಮುಂಬೈನ ಸೆಂಟ್ರಲ್, ವೆಸ್ಟರ್ನ್ ಮತ್ತು ಹಾರ್ಬರ್ ಲೋಕಲ್ ರೈಲು ಮಾರ್ಗಗಳಲ್ಲಿ ಹಳಿಗಳ ಮೇಲೆ ನೀರು ಬಂದಿದ್ದರಿಂದ ರೈಲು ಸಂಚಾರ ವಿಳಂಬವಾಗಿದ್ದು, ಪ್ರಯಾಣಿಕರು ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ಕಾಯುವಂತಾಗಿದೆ.
ಕೊಂಕಣದ ರತ್ನಗಿರಿ ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಯೇ ಲೋಕೋಪಯೋಗಿ ಇಲಾಖೆಯ (PWD) ಕಳಪೆ ಕಾಮಗಾರಿಯನ್ನು ಜಗಜ್ಜಾಹೀರುಗೊಳಿಸಿದೆ. ಮಂಡಂಗಡ್-ಬಂಕೋಟ್ ರಸ್ತೆಯ ಬಹುತೇಕ ಭಾಗ ಮಳೆಗೆ ಕೊಚ್ಚಿಹೋಗಿದ್ದು, ಪಲ್ವಾನಿ ಫಾಟಾ ಪ್ರದೇಶದಲ್ಲಿ ರಸ್ತೆಯ ಮಧ್ಯೆ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ. ಇದು ಸಂಚಾರಕ್ಕೆ ಭಾರಿ ಆತಂಕವನ್ನು ಉಂಟುಮಾಡಿದ್ದು, ಸ್ಥಳೀಯ ನಾಗರಿಕರು ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ರಸ್ತೆ ದುರಸ್ತಿಗೆ ಒತ್ತಾಯಿಸಿದ್ದಾರೆ. ಇತ್ತ ಪಾಲ್ಘರ್ ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮುಂಬೈ ಮಹಾನಗರದ ಮರೋಲ್ ಮಿಲಿಟರಿ ರಸ್ತೆಯಲ್ಲಿ ನಿಂತಿದ್ದ ಮೂರು ವಾಹನಗಳ ಮೇಲೆ ಬೃಹತ್ ಮರವೊಂದು ಇದ್ದಕ್ಕಿದ್ದಂತೆ ಉರುಳಿ ಬಿದ್ದ ಪರಿಣಾಮ ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ. ಜೋಗೇಶ್ವರಿ ಪಶ್ಚಿಮದ ಎ.ಸಿ. ರಸ್ತೆಯಲ್ಲೂ ಮರ ಬಿದ್ದಿದ್ದರಿಂದ ಅಲ್ಲಿ ನಿಲ್ಲಿಸಲಾಗಿದ್ದ ಟೆಂಪೋ ಮತ್ತು ವಿದ್ಯುತ್ ಮೀಟರ್ ಬಾಕ್ಸ್ ಸಂಪೂರ್ಣವಾಗಿ ಜಖಂಗೊಂಡಿವೆ. ಬೊರಿವಲಿ, ಕಾಂದಿವಲಿ, ಮಲಾಡ್ ಮತ್ತು ಗೋರೆಗಾಂವ್ ಭಾಗಗಳಲ್ಲೂ ಹಲವು ಕಡೆ ಮರಗಳು ಉರುಳಿಬಿದ್ದ ವರದಿಯಾಗಿದೆ. ಚೆಂಬೂರಿನಲ್ಲಿ ಮನೆಯೊಂದು ಕುಸಿದು ಒಬ್ಬರು ಸಾವನ್ನಪ್ಪಿರುವ ದುರಂತ ಘಟನೆ ಸಂಭವಿಸಿದೆ. ಆದರೆ, ಈ ಭಾರಿ ಮಳೆಯಿಂದಾಗಿ ಮುಂಬೈಗೆ ಕುಡಿಯುವ ನೀರು ಪೂರೈಸುವ ಏಳು ಪ್ರಮುಖ ಜಲಮೂಲಗಳಲ್ಲಿ ಒಂದಾದ ಪೊವಾಯಿ ಕೆರೆ ಇಂದು ಮುಂಜಾನೆ 5:30 ಕ್ಕೆ ಸಂಪೂರ್ಣವಾಗಿ ತುಂಬಿ ಹರಿಯಲಾರಂಭಿಸಿದೆ. ಜಲಾಶಯಗಳ ನೀರಿನ ಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿರುವುದು ಮುಂಬೈ ಮಹಾನಗರ ಪಾಲಿಕೆಗೆ (BMC) ಸಲ್ಪ ಸಮಾಧಾನ ತಂದಿದೆ. ಆದಾಗ್ಯೂ, ಹವಾಮಾನ ಇಲಾಖೆಯು ಮುಂಬರುವ ಮೂರು ದಿನಗಳ ಕಾಲ ಅತ್ಯಂತ ಭಾರಿ ಮಳೆಯ ಮುನ್ಸೂಚನೆ ನೀಡಿರುವುದರಿಂದ ನಾಗರಿಕರು ಅನಗತ್ಯ ಪ್ರಯಾಣ ಮಾಡದಂತೆ ಮತ್ತು ಜಾಗರೂಕರಾಗಿರುವಂತೆ ಆಡಳಿತ ಮಂಡಳಿ ಸೂಚಿಸಿದೆ.




