
”ಧರ್ಮ ಶ್ರದ್ಧೆ ಇದ್ದರೆ ಬದುಕಿನ ವಿಕಾಸಕ್ಕೆ ಪೂರಕ” — ಒಡಿಯೂರು ಶ್ರೀ
ಚಿತ್ರ ವರದಿ: ದಿನೇಶ್
ಥಾಣೆ (ಜು. 25): “ಭಜನೆ ನಿರಂತರವಾಗಿ ನಡೆಯಬೇಕು. ಇದರಿಂದ ಶಾಂತಿ, ನೆಮ್ಮದಿ ಹಾಗೂ ಸಾಮರಸ್ಯ ಸಾಧ್ಯ. ಶಿಸ್ತುಬದ್ಧ ಕಾರ್ಯಕ್ರಮಕ್ಕೆ ಥಾಣೆಯ ಈ ಕಾರ್ಯಕ್ರಮವೇ ಉದಾಹರಣೆ. ಪ್ರತಿಯೊಬ್ಬರೂ ತನ್ನನ್ನು ತಾನು ಅರಿಯಬೇಕು; ಅದಕ್ಕೆ ಅಧ್ಯಾತ್ಮ ಅಗತ್ಯ. ನಮ್ಮಲ್ಲಿ ಪ್ರೀತಿ ಇದ್ದರೆ ಸಂಪತ್ತು ಮತ್ತು ಕೀರ್ತಿ ತಾನಾಗಿಯೇ ಹುಡುಕಿಕೊಂಡು ಬರುತ್ತವೆ. ಬದುಕಿನಲ್ಲಿ ನಿರಾಸೆ ಇರಬಾರದು, ಜೀವನವು ಆದರ್ಶಮಯವಾಗಿರಬೇಕು. ವ್ಯಕ್ತಿ ವಿಕಾಸವಾದರೆ ರಾಷ್ಟ್ರ ವಿಕಾಸವಾಗುತ್ತದೆ. ಈ ವಿಕಾಸ ಮನೆಯಿಂದಲೇ ಆರಂಭವಾಗಬೇಕು. ಪ್ರಜ್ಞಾವಂತ ಪ್ರಜೆಗಳಿದ್ದರೆ ಆದರ್ಶ ರಾಷ್ಟ್ರ ನಿರ್ಮಾಣ ಸಾಧ್ಯ. ಧರ್ಮ ಶ್ರದ್ಧೆ ಇದ್ದರೆ ಅದು ಬದುಕಿನ ವಿಕಾಸಕ್ಕೆ ಪೂರಕವಾಗಿರುತ್ತದೆ” ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಜುಲೈ 24ರ ಶುಕ್ರವಾರದಂದು ಥಾಣೆ ಪಶ್ಚಿಮದ ಎಲ್.ಬಿ.ಎಸ್. ಮಾರ್ಗ, ರಹೇಜಾ ಗಾರ್ಡನ್ ಎದುರಿಗಿರುವ ಉದಯ್ ಶೆಟ್ಟಿ ಅವರ ಮಾಲಕತ್ವದ ‘ಹೊಟೇಲ್ ವುಡ್‌ಲ್ಯಾಂಡ್ ರಿಟ್ರೇಟ್’ ಸಭಾಂಗಣದಲ್ಲಿ ‘ಶ್ರೀ ಗುರುದೇವ ಸೇವಾ ಬಳಗ ಥಾಣೆ’ಯ ಸದಸ್ಯರ ಆಯೋಜನೆಯಲ್ಲಿ ಕಾರ್ಯಕ್ರಮ ಜರುಗಿತು. ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಆಯೋಜಿಸಲಾಗಿದ್ದ ಗುರುವಂದನೆ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಪಾರ ಸಂಖ್ಯೆಯ ಗುರುಭಕ್ತರಿಗೆ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಪ್ರಾರಂಭದಲ್ಲಿ ಉದಯ್ ಶೆಟ್ಟಿ ಮತ್ತು ಶುಭಲಕ್ಷ್ಮಿ ಉದಯ್ ಶೆಟ್ಟಿ ದಂಪತಿ ಹಾಗೂ ಅವರ ಪುತ್ರಿ ಶ್ರೇಯಾ ಶೆಟ್ಟಿ ಪಾದಪೂಜೆ ನೆರವೇರಿಸಿದರು. ನಂತರ ನವೋದಯ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಶ್ರೀ ಒಡಿಯೂರು ಸಂಸ್ಥಾನದ ಸಾಧ್ವಿ ಮಾತಾನಂದಮಯಿ ಮಂತ್ರಪಠಣ ಮಾಡಿದರು.




ಕಾರ್ಯಕ್ರಮವನ್ನು ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಉದಯ್ ಶೆಟ್ಟಿ ದಂಪತಿ, ಶ್ರೀ ಗುರುದೇವ ಸೇವಾ ಬಳಗ ಮುಂಬೈ ಘಟಕದ ಅಧ್ಯಕ್ಷ ದಾಮೋದರ್ ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ, ಉಪಾಧ್ಯಕ್ಷ ಮೋಹನ್ ಹೆಗ್ಡೆ, ಚಂದ್ರಾಹಾಸ್ ರೈ ಬೋಲ್ನಾಡುಗುತ್ತು, ಮನೋಜ್ ಹೆಗ್ಡೆ, ಶೇಖರ್ ಶೆಟ್ಟಿ ಹಾಗೂ ಶ್ರೀಮತಿ ಕುಶಲ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಒಡಿಯೂರು ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಮೀಜಿಯವರ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವಾ ಕಾರ್ಯಗಳನ್ನು ಭಕ್ತರಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ದೇವದಾಸ್ ಉಚ್ಚಿಲ್, ಶೇಖರ್ ಡಿ. ಶೆಟ್ಟಿ, ಶೇಖರ್ ಕೆ. ಶೆಟ್ಟಿ, ಹರೀಶ್ ಉದ್ಯಾವರ್, ಸುನಿಲ್ ಶೆಟ್ಟಿ, ಥಾಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಶೆಟ್ಟಿ ದಂಪತಿ, ಉಪಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಕಾರ್ಯದರ್ಶಿ ಕನಕ ಜಗದೀಶ್ ಶೆಟ್ಟಿ ಸೇರಿದಂತೆ ಅಪಾರ ಸಂಖ್ಯೆಯ ಗುರುಭಕ್ತರು ಪಾಲ್ಗೊಂಡಿದ್ದರು.





