
“ನಿಜವಾದ ಗುರುಭಕ್ತರನ್ನು ನೋಡಬೇಕಿದ್ದರೆ ಮಹಾರಾಷ್ಟ್ರದಲ್ಲಿ ಮಾತ್ರ ಸಾಧ್ಯ” – ಒಡಿಯೂರು ಶ್ರೀ
ಚಿತ್ರ ವರದಿ: ದಿನೇಶ್ ಕುಲಾಲ್
ಮುಂಬಯಿ, ಜು. 26: ಬಂಟರ ಸಂಘ ಮುಂಬಯಿ ಹಾಗೂ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಮಹಾರಾಷ್ಟ್ರ ಘಟಕ ಇವರ ಜಂಟಿ ಸಂಯೋಜನೆಯಲ್ಲಿ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜುಲೈ 29ರಂದು 27ನೇ ವರ್ಷದ ಗುರುಪೂರ್ಣಿಮಾ ಆಚರಣೆಯು ಭಜನೆ ಮತ್ತು ಸತ್ಸಂಗದೊಂದಿಗೆ ನಡೆಯಿತು.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಮಹಾರಾಷ್ಟ್ರ ಘಟಕದ ವಾರ್ಷಿಕೋತ್ಸವವನ್ನು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹಾಗೂ ಸಾಧ್ವಿ ಶ್ರೀ ಮಾತಾನಂದಮಯೀಯವರು ದೀಪ ಬೆಳಗಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷರಾದ ದಾಮೋದರ್ ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿಯ ಶ್ವೇತಾ ಚಂದ್ರಹಾಸ್ ರೈ, ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ಒಡಿಯೂರು ಪರಮ ಭಕ್ತ ವಾಮಯ್ಯ ಶೆಟ್ಟಿ, ಉದ್ಯಮಿ ವಾಮನ್ ಶೆಟ್ಟಿ, ಠಾಣೆ ಬಳಗದ ಗುಣಪಾಲ್ ಶೆಟ್ಟಿ, ಪುಣೆ ಬಳಗದ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ಉಪಸ್ಥಿತರಿದ್ದರು.
ಸ್ವಾಮೀಜಿಯವರನ್ನು ಒಡಿಯೂರು ಬಳಗದ ವತಿಯಿಂದ ಮತ್ತು ಬಂಟರ ಸಂಘದ ವತಿಯಿಂದ ಗೌರವಿಸಲಾಯಿತು. ಸಾಧ್ವಿ ಶ್ರೀ ಮಾತಾನಂದಮಯೀಯವರನ್ನು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಹಾಗೂ ಬಂಟರ ಸಂಘದ ಮಹಿಳಾ ವಿಭಾಗದವರು ಗೌರವಿಸಿದರು.

ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಚನ:
“ಗುರು ಎಂದರೆ ವ್ಯಕ್ತಿಯಲ್ಲ, ಅದೊಂದು ಶಕ್ತಿ. ಇಂದು ನಾವು ಆರಾಧಿಸುತ್ತಿರುವ ನಿತ್ಯಾನಂದ ಗುರುಗಳು ನಮ್ಮ ಹೃದಯದಲ್ಲಿ ಆನಂದವನ್ನು ನೀಡುವವರೆಂದು ನಾವು ನಂಬಿಕೊಂಡು ಬಂದಿದ್ದೇವೆ. ಆನಂದ ಪರಂಪರೆಗೆ ದೊಡ್ಡ ಕೊಡುಗೆ ನೀಡಿದವರು ನಿತ್ಯಾನಂದ ಗುರುಗಳು. ‘ಗುರು’ ಎಂಬ ಎರಡಕ್ಷರದಲ್ಲಿರುವ ಮಹತ್ವವೆಂದರೆ, ‘ಗು’ ಎಂದರೆ ಕತ್ತಲೆ, ‘ರು’ ಎಂದರೆ ಬೆಳಕು. ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಸುಜ್ಞಾನದ ಬೆಳಕು ನೀಡುವವನೇ ಗುರು. ಭಾರತ ದೇಶದಲ್ಲಿ ಗುರು ಪರಂಪರೆಗೆ ವಿಶೇಷ ಮಹತ್ವವಿದೆ. ತಾಯಿ-ತಂದೆಯೇ ಮೊದಲ ಗುರು. ತಾಯಿಗೆ ಮಹತ್ವ ನೀಡಬೇಕು, ತಾಯಿಯ ಕಣ್ಣಲ್ಲಿ ಕಣ್ಣೀರು ಬಾರದಂತೆ, ದುಃಖವಾಗದಂತೆ ಕಾಪಾಡುವುದು ಮಕ್ಕಳ ಕರ್ತವ್ಯ. ತಂದೆಯ ಕಣ್ಣಲ್ಲೂ ಕಣ್ಣೀರು ಬಾರದಂತೆ ನೋಡಿಕೊಳ್ಳಬೇಕು. ನಮ್ಮ ಬದುಕು ಬೆಳಕಾಗಬೇಕಾದರೆ ಇದು ಅಗತ್ಯ. ಒಂದು ಅಕ್ಷರ ಕಲಿಸಿದವನೂ ಕೂಡ ಗುರುವೇ. ಜಗತ್ತನ್ನೇ ಗುರುವಾಗಿ ಸ್ವೀಕರಿಸಿದಾಗ ಮಾತ್ರ ನಾವು ಬದುಕಿನಲ್ಲಿ ಬೆಳಕು ಕಾಣಲು ಸಾಧ್ಯ.”
“ಮುಂಬಯಿಯ ಬಂಟರ ಸಂಘ ಮತ್ತು ಒಡಿಯೂರು ಬಳಗ ಒಗ್ಗಟ್ಟಿನಿಂದ ಸೇವೆ ಮಾಡುತ್ತಿವೆ. ನಮ್ಮಲ್ಲಿ ಸಂಪತ್ತು ಬಂದಾಗ ವಿನಯಪೂರ್ವಕವಾಗಿರಬೇಕು; ಅಹಂಕಾರ ಬಾರದಂತೆ ನೋಡಿಕೊಳ್ಳಬೇಕು. ಶಿಕ್ಷಣ ಇಂದು ವೃತ್ತಿಯಾಗುತ್ತಿದೆ, ಅದು ಸೇವೆಯಾಗಬೇಕು. ನಾನು 43 ವರ್ಷಗಳಿಂದ ಧರ್ಮ ಕಾರ್ಯಕ್ಕಾಗಿ ಸಂಚಾರ ಮಾಡುತ್ತಿದ್ದೇನೆ. ಎಲ್ಲಿ ನೋಡಿದರೂ ಅಲ್ಲಿ ಬಂಟರ ಹೆಸರು ಕೇಳಿಬರುತ್ತಿದೆ. ಕಷ್ಟವೆಂದು ಬಂಟರಲ್ಲಿ ತಿಳಿಸಿದಾಗ ಸ್ಪಂದಿಸುವ ಮನೋಭಾವ ಅವರಲ್ಲಿರುತ್ತದೆ. ಇದು ಬಂಟರ ಗುಣ; ಬಂಟನೆಂದರೆ ರಕ್ಷಕ. ಬರಿ ರಕ್ಷಕನಲ್ಲ, ಧರ್ಮ ಸಂರಕ್ಷಕ. ಏಕೆಂದರೆ ನಮ್ಮ ಜಿಲ್ಲೆಯ ಎಲ್ಲಾ ದೇವಸ್ಥಾನಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಅಭಿವೃದ್ಧಿಯ ಕಾರ್ಯಗಳಿಗೆ ಬಹುಪಾಲನ್ನು ನೀಡಿದವರು ಬಂಟರು. ಇಂತಹ ಬಂಟರ ಒಗ್ಗಟ್ಟಿನ ಈ ಸಂಘಟನೆ ಸಮಾಜಕ್ಕೆ ಇನ್ನಷ್ಟು ಆದರ್ಶವಾಗುವ ರೀತಿಯಲ್ಲಿ ಸೇವೆ ಮಾಡಲಿ.”

“27 ವರ್ಷಗಳ ಹಿಂದೆ ಒಡಿಯೂರು ಬಳಗ ನಡೆಸಿದ ಕಾರ್ಯಗಳನ್ನು ನೆನಪಿಸಿಕೊಂಡಾಗ ಬಹಳಷ್ಟು ಸಂತೋಷವಾಗುತ್ತದೆ. ಕಳೆದ ಹತ್ತು ದಿನಗಳಿಂದ ಈ ನಗರದಲ್ಲಿ ಭಕ್ತರ ಅಪಾರ ಮನೆಗಳಿಗೆ ಭೇಟಿ ನೀಡಿದ್ದೇವೆ. ಮನೆಗಳನ್ನೇ ದೇವಸ್ಥಾನ ಮಾಡಿದ್ದಾರೆ, ಆ ಮನೆಗಳಲ್ಲಿ ನಡೆಯುತ್ತಿರುವ ಕಾರ್ಯಗಳನ್ನು ಕಂಡಾಗ ಆನಂದವಾಗುತ್ತದೆ. ನಿಜವಾದ ಗುರುಭಕ್ತರನ್ನು ನೋಡಬೇಕಿದ್ದರೆ ಅದು ಮಹಾರಾಷ್ಟ್ರದಲ್ಲಿ ಮಾತ್ರ ಸಾಧ್ಯ. ಯಾರಲ್ಲೂ ಕೂಡ ಸ್ವಾರ್ಥವಿಲ್ಲದೆ ಗುರುಸೇವೆಯನ್ನು ಮಾತ್ರ ಮಾಡುತ್ತಿದ್ದಾರೆ. ಇಲ್ಲಿಯ ಗುರುಭಕ್ತರು ಮಾಡಿರುವ ಗುರುಸೇವೆ ನಿಜವಾಗಿಯೂ ಭಗವಂತನಿಗೆ ಸಮರ್ಪಣೆಯಾಗಿದೆ. ಒಡಿಯೂರಿಗೆ ಪ್ರಾರಂಭದ ದಿನಗಳಲ್ಲಿ ಬಂದವರು ಇಂದಿನ ದಿನದಲ್ಲೂ ನಮ್ಮೊಟ್ಟಿಗೆ ಸೇರಿಕೊಂಡಿದ್ದಾರೆ. ಭಕ್ತಿ-ಶ್ರದ್ಧೆಯ ಮೇಲೆ ನಂಬಿಕೆ ಇರಬೇಕು, ಅದು ಗುರುವಾಗಿರಲಿ, ದೇವರಾಗಿರಲಿ. ಭಗವಂತನತ್ತ ಸಾಗುವ ಪ್ರಯಾಣದಲ್ಲಿ ದಾರಿಯ ಬೆಳಕು ಗುರುವಾಗಿರುತ್ತಾನೆ. ನಮ್ಮಿಂದ ನಾವೇ ಪರಿವರ್ತನೆಯಾಗಬೇಕು, ನಮ್ಮೊಳಗಿನ ಭಗವಂತನನ್ನು ನೋಡುವಂತಾಗಬೇಕು. ದಾನ-ಧರ್ಮಗಳನ್ನು ಮಾಡಿದಾಗ ಪುಣ್ಯ ಸಂಚಯನವಾಗುತ್ತದೆ.”
“ಒಡಿಯೂರು ಬಳಗದವರು ತಮ್ಮ ಆದಾಯದ ಒಂದು ಪಾಲನ್ನು ಧಾರ್ಮಿಕ ಕಾರ್ಯಕ್ಕೆ ವಿನಿಯೋಗಿಸಲು ನೀಡುತ್ತಿದ್ದಾರೆ. ಬಾಲ್ಯದಲ್ಲೇ ಸೇವಾ ಬಳಗದ ಮಾತಾಪಿತೃಗಳು ದಾರಿ ತೋರಿಸಿ ಮಾರ್ಗದರ್ಶನ ನೀಡಿದ್ದರಿಂದ ಇಂದು ಬಳಗಕ್ಕೆ ಯುವ ಸಮುದಾಯ ಬಹಳಷ್ಟು ದೇಣಿಗೆಯನ್ನು ಸಮರ್ಪಿಸುತ್ತಿದೆ. ನಾವು ತುಳುನಾಡಿನ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದವರು, ಅದನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳೋಣ. ಮಕ್ಕಳಿಗೆ ಯಾವುದೇ ಭಾಷೆಯನ್ನು ಕಲಿಸಿ, ಆದರೆ ನಮ್ಮ ಮಾತೃಭಾಷೆಯನ್ನು ಮಾತ್ರ ಮರೆಯಬಾರದು. ಭಾಷೆಯಲ್ಲಿ ಸಂಸ್ಕೃತಿ ಇದೆ. ಭಾರತೀಯ ಪರಂಪರೆ ಎಂದರೆ ಅದು ಸಂಸ್ಕೃತಿಯ ಬೆಳಕು, ಅದನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಭಾರತದ ಮೌಲ್ಯವೇ ಆಧ್ಯಾತ್ಮಿಕತೆ. ನಮಗೆ ರಾಷ್ಟ್ರ ಮುಖ್ಯ, ರಾಷ್ಟ್ರ ಉಳಿದರೆ ಧರ್ಮ ಉಳಿಯುತ್ತದೆ. ಸನಾತನ ಹಿಂದೂ ಧರ್ಮಕ್ಕೆ ಅಂತ್ಯವಿಲ್ಲ, ಅಂತಹ ಧರ್ಮವನ್ನು ಉಳಿಸುವ ಕಾರ್ಯವನ್ನು ಮಾಡೋಣ” ಎಂದು ನುಡಿದರು.

ಸಾಧ್ವಿ ಶ್ರೀ ಮಾತಾನಂದಮಯೀಯವರು ಗುರುವಿನ ಭಜನೆಯ ಮೂಲಕ ಗುರುವನ್ನು ಸ್ಮರಿಸಿಕೊಂಡರು. ಬಳಿಕ ಯುವ ಬಳಗದ ವತಿಯಿಂದ ಶ್ರೀಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಹಾಪ್ರಸಾದ ಅನ್ನದಾನವನ್ನು ನೀಡಿದ ವಾಮನ್ ಶೆಟ್ಟಿ ದಂಪತಿಯನ್ನು ಶ್ರೀಗಳು ಗೌರವಿಸಿದರು. ಹಾಗೂ ಬಂಟರ ಸಂಘದ ಪದಾಧಿಕಾರಿಗಳನ್ನು, ಬಳಗದ ಹಿರಿಯ ಸದಸ್ಯರಾದ ವಾಮಯ್ಯ ಶೆಟ್ಟಿಯವರನ್ನು, ಬಳಗದ ಅಧ್ಯಕ್ಷರಾದ ದಾಮೋದರ್ ಶೆಟ್ಟಿ ದಂಪತಿಯನ್ನು, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿಯ ಶ್ವೇತಾ ಚಂದ್ರಹಾಸ್ ರೈ ದಂಪತಿಯನ್ನು, ಉದ್ಯಮಿ ರವೀಂದ್ರನಾಥ್ ಭಂಡಾರಿ ಹಾಗೂ ಪುಣೆಯ ಒಡಿಯೂರು ಬಳಗದ ಸರ್ವ ಸದಸ್ಯರನ್ನು ಶ್ರೀಗಳು ವಿಶೇಷವಾಗಿ ಗೌರವಿಸಿದರು.
ಕಾರ್ಯಕ್ರಮವನ್ನು ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ ನಿರೂಪಿಸಿ ವಂದಿಸಿದರು. ಆರಂಭದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು. ಮಹಾಮಂಗಳಾರತಿಯು ಪೂಜ್ಯ ಶ್ರೀಗಳವರ ದಿವ್ಯ ಹಸ್ತದಿಂದ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಪಾಲ್ಗೊಂಡಿದ್ದರು.

ಒಡಿಯೂರು ಶ್ರೀಗಳು ಲೋಕ ಮೆಚ್ಚುವ ಗುರುವಾಗಲು ಅವರಲ್ಲಿರುವ ತತ್ವಜ್ಞಾನ ಹಾಗೂ ಆಧ್ಯಾತ್ಮಿಕತೆಯೇ ಕಾರಣ: ಪ್ರವೀಣ್ ಭೋಜ ಶೆಟ್ಟಿ
ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, “ಕಳೆದ 27 ವರ್ಷಗಳಿಂದ ಬಳಗ ಮತ್ತು ಸಂಘ ಜಂಟಿಯಾಗಿ ಗುರುಪೂರ್ಣಿಮೆಯನ್ನು ಆಚರಿಸಿಕೊಂಡು ಬರುತ್ತಿವೆ. ಗುರು ಎಲ್ಲರಿಗೂ ಆಗುವುದಕ್ಕೆ ಸಾಧ್ಯವಿಲ್ಲ, ಒಬ್ಬೊಬ್ಬರಿಗೆ ಒಂದೊಂದು ಗುರುಗಳಿರುತ್ತಾರೆ. ಆದರೆ ಎಲ್ಲರೂ ಮೆಚ್ಚುವ ಲೋಕದ ಗುರುವಾಗಬೇಕಿದ್ದರೆ ಇಂತಹ ತತ್ವಜ್ಞಾನ ಮತ್ತು ಆಧ್ಯಾತ್ಮಿಕತೆ ಇರಬೇಕು. ಅದು ಒಡಿಯೂರು ಶ್ರೀಗಳಿಂದ ಸಾಧ್ಯವಾಗಿದೆ. ಬಂಟರ ಸಂಘಕ್ಕೆ ನೂರು ವರ್ಷಗಳು ಪೂರೈಸುತ್ತಿದ್ದು, ನಿಮ್ಮ ಆಶೀರ್ವಾದ ಅಗತ್ಯವಿದೆ. 100ನೇ ವರ್ಷದ ಸಂದರ್ಭದಲ್ಲಿ ಮುಂಬರುವ ಅಧ್ಯಕ್ಷರಿಗೆ ಹಾಗೂ ನನಗೂ ಒಂದು ಯೋಜನೆಯಿದೆ—ಈ ಭವನಕ್ಕೆ ಹೊಸ ರೂಪ ಕೊಡಬೇಕೆನ್ನುವುದು. ಕಟ್ಟಡ ನಿರ್ಮಾಣವಾಗಿ ಬಹಳಷ್ಟು ವರ್ಷಗಳಾಗಿದ್ದು, ನೂತನ ಭವನ ನಿರ್ಮಾಣದ ಕನಸಿದೆ. ಅದರೊಂದಿಗೆ ಬಂಟರ ಆಸ್ಪತ್ರೆ ನಿರ್ಮಾಣ ಮಾಡಬೇಕೆನ್ನುವ ಕನಸೂ ಇದೆ. ಎಲ್ಲವೂ ಈಡೇರಲು ನಿಮ್ಮ ಆಶೀರ್ವಾದ ಅಗತ್ಯವಿದೆ. ಬಳಗವು ಬಹಳಷ್ಟು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದು, ಮುಂದೆಯೂ ಇನ್ನಷ್ಟು ಸೇವಾ ಕಾರ್ಯಗಳನ್ನು ಮಾಡಲಿ” ಎಂದು ಆಶಿಸಿದರು.





