28 C
Mumbai
September 18, 2026
Mumbai News Kannada
ಸುದ್ದಿ

ಮೊಳಹಳ್ಳಿ ಶಿವರಾವ್ ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಸಮಗ್ರ ದಾಖಲೀಕರಣ: ‘ತ್ಯಾಗಮಯಿ ಮೊಳಹಳ್ಳಿ’ ಗ್ರಂಥ ಯುವಪೀಳಿಗೆಗೆ ಸ್ಫೂರ್ತಿ – ಡಾ. ಎಂ.ಎನ್. ರಾಜೇಂದ್ರ ಕುಮಾರ್





ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ರಂಗಕ್ಕೆ ಭದ್ರಬುನಾದಿ ಹಾಕಿದ ಕೀರ್ತಿಶೇಷ ಮೊಳಹಳ್ಳಿ ಶಿವರಾವ್ ಅವರ ಜೀವನಾದರ್ಶ, ತ್ಯಾಗ ಹಾಗೂ ಸಂಘಟನಾ ಶಕ್ತಿ ಸಮಾಜಕ್ಕೆ ಸದಾ ಪ್ರೇರಣೆಯಾಗಿದೆ. ಕರಾವಳಿಯಲ್ಲಿ ಮೊಳಹಳ್ಳಿ ಶಿವರಾವ್ ಅವರು ಬಿತ್ತಿದ ಸಹಕಾರ ಬೀಜ ಇಂದು ಬೃಹತ್ ವೃಕ್ಷವಾಗಿ ಬೆಳೆದು ಸಾವಿರಾರು ಕುಟುಂಬಗಳ ಬದುಕಿಗೆ ಆಶ್ರಯವಾಗಿದೆ. ಇಂತಹ ಮಹಾನ್ ವ್ಯಕ್ತಿತ್ವದ ಸಾಧನೆ ಮತ್ತು ಸಹಕಾರಿ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳನ್ನು ಸಮಗ್ರವಾಗಿ ದಾಖಲಿಸಿರುವ ‘ತ್ಯಾಗಮಯಿ ಮೊಳಹಳ್ಳಿ’ ಗ್ರಂಥವು ಯುವಪೀಳಿಗೆಗೆ ಸ್ಫೂರ್ತಿ ನೀಡುವ ಮೌಲಿಕ ಕೃತಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅಂಕಣಕಾರ ಹಾಗೂ ಕ್ರೀಡಾ ಲೇಖಕ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರು ಬರೆದ ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯನ್ನು ಸೋಮವಾರ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬ್ಯಾಂಕಿನ ಪ್ರಧಾನ ಕಚೇರಿಯ ಕಿರಿಯ ನಿರೀಕ್ಷಕರು ಹಾಗೂ ಪತ್ರಿಕೋದ್ಯಮದಲ್ಲಿ ಕ್ರೀಡಾ ಬರಹಗಾರರಾಗಿ ಸುಮಾರು 35ಕ್ಕೂ ಹೆಚ್ಚು ವರ್ಷಗಳಿಂದ ಗುರುತಿಸಿಕೊಂಡಿರುವ ಜಗದೀಶ್ಚಂದ್ರ ಅಂಚನ್ ಅವರು ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯ ಮೂಲಕ ಮೊಳಹಳ್ಳಿ ಶಿವರಾವ್ ಅವರ ಜೀವನ ಮತ್ತು ಸಾಧನೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉತ್ತಮ ಪ್ರಯತ್ನ ಮಾಡಿದ್ದಾರೆ. ಅಂಚನ್ ಅವರ ಅಧ್ಯಯನಶೀಲತೆ, ಸಂಶೋಧನಾ ಮನೋಭಾವ ಮತ್ತು ಪರಿಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಮುಖರ ಉಪಸ್ಥಿತಿ: ಈ ಕಾರ್ಯಕ್ರಮದಲ್ಲಿ ನಬಾರ್ಡ್ ಸಿಜಿಎಂ ಸಂಗೀತಾ ಕರ್ತ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಮಹಾಪ್ರಬಂಧಕ ಸುನೀಲ್ ಕುಮಾರ್ ಹೊಳ್ಳ, ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕ ರಮೇಶ್ ಎಚ್.ಎನ್., ಸಹಾಯಕ ನಿಬಂಧಕ ಸುಧೀರ್ ಕುಮಾರ್ ಹಾಗೂ ಕೃತಿಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಉಪಸ್ಥಿತರಿದ್ದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

ಲೇಖಕರ ಕುರಿತು: ಹಿರಿಯ ಕ್ರೀಡಾ ಲೇಖಕರಲ್ಲಿ ಒಬ್ಬರಾಗಿರುವ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರು ಸುಮಾರು 36 ವರ್ಷಗಳ ನಿರಂತರ ಪತ್ರಿಕೋದ್ಯಮದ ಅವಧಿಯಲ್ಲಿ 4,500ಕ್ಕೂ ಹೆಚ್ಚು ಕ್ರೀಡಾ ಲೇಖನಗಳನ್ನು ಬರೆದಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕಿನ ಉದ್ಯೋಗಿಯಾಗಿರುವ ಇವರು ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ 200ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ನಾಟಕ, ಸಿನಿಮಾ ಮತ್ತು ಯಕ್ಷಗಾನದ ಕುರಿತು ವಿಮರ್ಶಾತ್ಮಕ ಲೇಖನಗಳ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಸಹಕಾರ ರಂಗದ ಪಿತಾಮಹ ಮೊಳಹಳ್ಳಿ ಶಿವರಾಯರ ಮೇಲೆ ಇದ್ದ ವಿಶೇಷ ಗೌರವದಿಂದಾಗಿ, ಕಳೆದ 10 ವರ್ಷಗಳಿಂದ ಪ್ರತಿವರ್ಷ ಆಗಸ್ಟ್ 4ರಂದು ಅವರ ಜನ್ಮದಿನದ ಅಂಗವಾಗಿ ವಿವಿಧ ಪತ್ರಿಕೆಗಳಲ್ಲಿ ಸ್ಮರಣಾರ್ಥ ಲೇಖನಗಳನ್ನು ಬರೆಯುತ್ತಿದ್ದರು. ಈ ನಿರಂತರ ಅಧ್ಯಯನ ಮತ್ತು ಸಾಮಾಜಿಕ ಕಾಳಜಿಯೇ ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯ ರಚನೆಗೆ ಪ್ರೇರಣೆಯಾಗಿದೆ.



Related posts

ಕಾಪು ಶ್ರೀ ಹೊಸಮಾರಿಗುಡಿಯ ಜೀರ್ಣೋದ್ಧಾರಕ್ಕೆ ರಮೇಶ್ ಉಚ್ಚಿಲ ಮತ್ತು ಕುಟುಂಬಸ್ತರಿಂದ 75 ಶಿಲಾ ಸೇವೆ.

Mumbai News Desk

ಮುಂಬಯಿ : ಕರ್ನಾಟಕ ಬ್ಯಾಂಕ್ ನ ಹಿರಿಯ ಸಿಬ್ಬಂದಿ ನಾರಾಯಣ ಮೊಗವೀರ ಅವರ ಬೀಳ್ಕೊಡುವ ಸಮಾರಂಭ

Mumbai News Desk

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬರಿಗಾಲಿನಲ್ಲಿ ಓಡಿ ಮ್ಯಾರಥಾನ್ ಗೆದ್ದ ತಾಯಿ; ದೇಶದಾದ್ಯಂತ ಹರಿದುಬಂದ ನೆರವು

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಉಡುಪಿಯಲ್ಲಿ ಜರಗಿದ ಯಶಸ್ವಿ ಸರಣಿ ಕಾರ್ಯಕ್ರಮಗಳು

Mumbai News Desk

ದ್ವಮ್ದ್ವ’ ಕನ್ನಡ ಕಲಾತ್ಮಕ ಚಿತ್ರ ಬಿಡುಗಡೆ – ಪತ್ರಕರ್ತರಿಗೆ ವಿಶೇಷ ಪ್ರದರ್ಶನ

Mumbai News Desk

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ : ಶರನ್ನವರಾತ್ರಿ ಉತ್ಸವ ಆರಂಭ

Mumbai News Desk