
ವರದಿ: ಪಿ. ಆರ್. ರವಿಶಂಕರ್
ಬೊಯಿಸರ್ (ಆ. 09): ಇಲ್ಲಿನ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಆಗಸ್ಟ್ 08ರ ಶನಿವಾರದಂದು ಅವಧೂತ ಸದ್ಗುರು ನಿತ್ಯಾನಂದರ 65ನೆಯ ಪುಣ್ಯತಿಥಿ ಸ್ಮರಣೋತ್ಸವವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಪ್ರಾತಃಕಾಲದ ಸಂಕಲ್ಪ ಪೂಜೆ ಹಾಗೂ ಗಣಹೋಮದೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡವು. ಮಂದಿರದ ಟ್ರಸ್ಟಿಗಳಾದ ಶ್ರೀಮತಿ ಪದ್ಮಾವತಿ ಮತ್ತು ಶ್ರೀ ಸತ್ಯಾ ಕೋಟ್ಯಾನ್ ದಂಪತಿ ಕಲಶ ಪೂಜೆಯನ್ನು ನೆರವೇರಿಸಿದರು. ಆ ಬಳಿಕ ಗುರುದೇವರಿಗೆ ಪಂಚಾಮೃತ ಕಲಶಾಭಿಷೇಕ ಹಾಗೂ ಆಗಮಿಸಿದ ಎಲ್ಲಾ ಭಕ್ತಾಭಿಮಾನಿಗಳಿಂದ ಎಳೆನೀರು (ಸೀಯಾಳ) ಅಭಿಷೇಕ ಜರುಗಿತು.

ಬೆಳಿಗ್ಗೆ 8 ಗಂಟೆಗೆ ಬೆಳಗಿನ ಆರತಿಯ ನಂತರ ಸಾರ್ವಜನಿಕ ಸಹಭಾಗಿತ್ವದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿತು. ತದನಂತರ ಭಕ್ತಾದಿಗಳಿಂದ ವಿವಿಧ ಭಕ್ತಿಗೀತೆಗಳು ಹಾಗೂ ಭಜನಾ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಮತ್ತು ಮಹಾ ಅನ್ನಸಂತರ್ಪಣೆ ನೆರವೇರಿತು.
ಈ ಪುಣ್ಯತಿಥಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಂದಿರದ ಟ್ರಸ್ಟಿ ಶ್ರೀನಿವಾಸ್ ಕೋಟ್ಯಾನ್, ಪಾಲ್ಘರ್ ತಾಲೂಕು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ರಘುರಾಮ್ ಎಮ್. ರೈ, ಮೀರಾ ಡಹಾಣು ಬಂಟ್ಸ್ ಸಂಸ್ಥೆಯ ಟ್ರಸ್ಟಿ ಕೆ. ಭುಜಂಗ ಶೆಟ್ಟಿ, ಉದ್ಯಮಿ ಪ್ರವೀಣ್ ಶೆಟ್ಟಿ, ಸ್ವಾಮಿ ನಿತ್ಯಾನಂದ ಭಕ್ತ ವೃಂದದ ಸದಸ್ಯರು, ಭಜನಾ ಮಂಡಳಿಯ ಸದಸ್ಯರು, ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಚಿತ್ರ ಹಾಗೂ ವರದಿ: ಪಿ. ಆರ್. ರವಿಶಂಕರ್ ಸಂಪರ್ಕ: 8483980035




