
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬೈಯಲ್ಲಿ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ; ಹಿರಿಯ ಸದಸ್ಯ ರಾಮಚಂದ್ರ ಗಾಣಿಗರಿಗೆ ಆತ್ಮೀಯ ಗೌರವ
ಕರ್ನಾಟಕದ ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜಾಗೃತಿಯ ಆಶಯದೊಂದಿಗೆ ಕಳೆದ 25 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ನೋಂದಾಯಿತ ಸರ್ಕಾರೇತರ ಸಂಸ್ಥೆ ‘ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಿಶೇಷ ಸಭೆ ಆಗಸ್ಟ್ 26ರಂದು ಸಂಜೆ ಅಂಧೇರಿ ಪೂರ್ವ ಸಾಕಿನಾಕ ಹೋಟೆಲ್ ಪೆನೆಂಜುಲ ಗ್ರಾಂಡ್‌ನಲ್ಲಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಅವರು ಸಭೆಯನ್ನು ಸ್ವಾಗತಿಸಿ, ವಿಶೇಷ ಸಭೆಯ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು.
ಸೆಪ್ಟೆಂಬರ್ 6ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಸಮಿತಿಯ ಬೆಳ್ಳಿ ಹಬ್ಬವನ್ನು ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ಹಾಗೂ ಯಶಸ್ವಿಯಾಗಿ ನಡೆಸುವ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

ಬೆಳ್ಳಿ ಹಬ್ಬದ ಕಾರ್ಯಕ್ರಮದ ಸಿದ್ಧತೆ, ಕಾರ್ಯಕ್ರಮದ ರೂಪುರೇಷೆ ಹಾಗೂ ವಿವಿಧ ಜವಾಬ್ದಾರಿಗಳ ನಿರ್ವಹಣೆ ಸೇರಿದಂತೆ ಸಮಾರಂಭವನ್ನು ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಸಭೆಯಲ್ಲಿ ಅಗತ್ಯ ಸಲಹೆ–ಸೂಚನೆಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಸಂಸ್ಥಾಪಕ ಜಯಕೃಷ್ಣ ಎ. ಶೆಟ್ಟಿ, ಉಪಾಧ್ಯಕ್ಷರುಗಳಾದ ಪಿ. ಧನಂಜಯ ಶೆಟ್ಟಿ, ಡಾ. ಸುರೇಂದ್ರ ಕುಮಾರ್ ಹೆಗ್ಡೆ, ನ್ಯಾಯವಾದಿ ಆರ್. ಎಂ. ಭಂಡಾರಿ ಹಾಗೂ ಶ್ರೀನಿವಾಸ ಸಪಲ್ಯ ಅವರು ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಪೂರಕವಾದ ತಮ್ಮ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಸಮಿತಿಯ ಮಾಧ್ಯಮ ವಕ್ತಾರ ದಯಾ ಸಾಗರ ಚೌಟ ಅವರು ಸೆಪ್ಟೆಂಬರ್ 6ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಬೆಳ್ಳಿ ಹಬ್ಬದ ಸಮಗ್ರ ಕಾರ್ಯಕ್ರಮದ ರೂಪುರೇಷೆಗಳನ್ನು ಸವಿಸ್ತಾರವಾಗಿ ಸಭೆಯ ಮುಂದಿಟ್ಟರು. ಸಮಿತಿಯ ಬೆಳ್ಳಿ ಹಬ್ಬವನ್ನು ವ್ಯವಸ್ಥಿತವಾಗಿ, ಅರ್ಥಪೂರ್ಣತೆಯಿಂದ ಆಚರಿಸುವ ಮೂಲಕ ಸಂಸ್ಥೆಯ ಇದುವರೆಗಿನ ಸೇವಾ ಪಯಣಕ್ಕೆ ಮತ್ತಷ್ಟು ಮೆರುಗು ನೀಡುವ ಉದ್ದೇಶದಿಂದ ಸಭೆಯಲ್ಲಿ ಸಿದ್ಧತೆಗಳನ್ನು ಚುರುಕುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.
ಈ ಶುಭಾವಸರದಲ್ಲಿ ಸಮಿತಿಯ ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆಯನ್ನು ಮುಂಬೈಯಲ್ಲಿ ಬಿಡುಗಡೆ ಮಾಡಲಾಯಿತು.
ಹಾಗೂ ಸಮಿತಿಯಲ್ಲಿ ಪ್ರಾರಂಭದ ದಿನದಿಂದಲೂ ಸದಸ್ಯರಾಗಿ , ಸಮಿತಿಯ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಹಿರಿಯ ಸದಸ್ಯ ರಾಮಚಂದ್ರ ಗಾಣಿಗ ಅವರನ್ನು ಸಮಿತಿಯ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿದ ರಾಮಚಂದ್ರ ಗಾಣಿಗ ಅವರು
ಇಂದಿನ ಈ ಶುಭ ಸಂದರ್ಭದಲ್ಲಿ, ನನ್ನನ್ನು ಪ್ರೀತಿಯಿಂದ ಆಹ್ವಾನಿಸಿದಾಗ, ಆ ಆತ್ಮೀಯತೆಗೆ ಗೌರವ ನೀಡಿ ನಾನೇ ಖುದ್ದಾಗಿ ನಿಮ್ಮ ಮಧ್ಯೆ ಉಪಸ್ಥಿತನಾಗಬೇಕೆಂಬ ಹಂಬಲದಿಂದ ಇಲ್ಲಿಗೆ ಬಂದಿದ್ದೇನೆ. ಸತ್ಯ ಹೇಳಬೇಕೆಂದರೆ, ಈ ಕಾರ್ಯಕ್ರಮದ ಗಂಭೀರತೆ ಮತ್ತು ರೂಪುರೇಷೆಗಳ ಬಗ್ಗೆ ನನಗೆ ಪೂರ್ಣ ಮಾಹಿತಿ ಇರಲಿಲ್ಲ. ಆದರೆ, ನಿಮ್ಮಂತಹ ಮಹನೀಯರ ಪ್ರತಿಯೊಂದು ಕ್ಷಣವೂ ಅತ್ಯಂತ ಮೌಲ್ಯಯುತವಾದದ್ದು ಎಂಬುದನ್ನು ನಾನು ಬಲ್ಲೆ. ಇಂದು ಈ ಸಂಸ್ಥೆಯ ಕಾರ್ಯವೈಖರಿಯನ್ನು ಕಣ್ಣುಂಬಿಕೊಳ್ಳುತ್ತಿದ್ದೇನೆ. ಸಮಿತಿಯ ಪ್ರತಿಯೊಬ್ಬರು ನಿಷ್ಕಲ್ಮಶ ಮನಸಿನ ಸಜ್ಜನರು . ಇಲ್ಲಿ ಯಾವುದೇ ಕುತಂತ್ರ, ಛಲ ಅಥವಾ ಮೋಸದ ಲೇಶವೂ ಇಲ್ಲದ ಇಂತಹ ಒಂದು ಸೌಹಾರ್ದಯುತ ವಾತಾವರಣದಲ್ಲಿ ನಾನು ನಿಮ್ಮೊಂದಿಗೆ ಇದ್ದದ್ದು ನನ್ನ ಭಾಗ್ಯ , ನಿಮ್ಮ ಈ ಪ್ರೀತಿ, ಆದರ ಹಾಗೂ ಗೌರವಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ಭಾವುಕರಾಗಿ ನುಡಿದರು.
ಜಯಕೃಷ್ಣ ಶೆಟ್ಟಿ ಮಾತನಾಡಿ “ರಾಮಚಂದ್ರ ಗಾಣಿಗರು ನಮ್ಮ ಸಮಿತಿಯ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಗಾಣಿಗ ಸಮಾಜದ ಅಧ್ಯಕ್ಷರಾಗಿದ್ದ ಅವರು ನಮ್ಮ ಸಮಿತಿಯಲ್ಲಿ ಸಕ್ರಿಯರಾಗಿರುವುದು ನಮ್ಮೆಲ್ಲರ ಸೌಭಾಗ್ಯ ಹಾಗೂ ಹೆಮ್ಮೆಯ ವಿಷಯ. ಅವರ ಅಪಾರ ಕೊಡುಗೆಗಳ ಜೊತೆಗೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅವರ ಸಹೋದರ ಆನಂದ ಗಾಣಿಗರ ಬೆಂಬಲವೂ ನಮಗೆ ಸದಾ ಲಭ್ಯವಿದೆ. ರಾಮಚಂದ್ರ ಗಾಣಿಗರು ಹಾಗೂ ಅವರ ಕುಟುಂಬದವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಮತ್ತು ಯೋಗದಾನ ಅತ್ಯಂತ ಶ್ಲಾಘನೀಯ. ಈ ಶುಭ ಸಂದರ್ಭದಲ್ಲಿ ರಾಮಚಂದ್ರ ಗಾಣಿಗರಿಗೆ ಭಗವಂತನು ಪರಿಪೂರ್ಣ ಆರೋಗ್ಯ, ದೀರ್ಘಾಯುಸ್ಸು ಮತ್ತು ಸಂತೋಷವನ್ನು ಕರುಣಿಸಲಿ. ಅವರ ಮಾರ್ಗದರ್ಶನ, ಪ್ರೀತಿ ಮತ್ತು ಸನ್ನಿಧಾನ ನಮಗೆ ಸದಾ ಹೀಗೆಯೇ ದೊರೆಯುತ್ತಿರಲಿ ಎಂದು ನುಡಿದರು.
ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್ ಮಾತನಾಡುತ್ತಾ “ನಮ್ಮ ಸಂಸ್ಥೆಯ ಬೆಳ್ಳಿ ಹಬ್ಬದ ಸಂಭ್ರಮದ ಕಾರ್ಯಕ್ರಮವು ಸೆಪ್ಟೆಂಬರ್ 6 ರಂದು ಮಧ್ಯಾಹ್ನ 3:00 ಗಂಟೆಗೆ ಮಂಗಳೂರು, ಟೌನ್ ಹಾಲ್‌ನಲ್ಲಿ ನೆರವೇರಲಿದೆ. ಈ ಶುಭ ಸಂದರ್ಭದ ಆಹ್ವಾನ ಪತ್ರಿಕೆಯನ್ನು ಹೆಮ್ಮೆಯಿಂದ ಇಂದು ಬಿಡುಗಡೆ ಮಾಡಿದ್ದೇವೆ.ಕರಾವಳಿ ಕರ್ನಾಟಕದ ಜನತೆ ಹಾಗೂ ಜಯಶ್ರೀಕೃಷ್ಣ ಪರಿಸರ ಸಮಿತಿಯೊಂದಿಗೆ ಸದಾ ಜೊತೆಯಾಗಿ ನಿಂತಿರುವ ವಿವಿಧ ಸಮಾಜದ ಸಂಘ-ಸಂಸ್ಥೆಗಳು ಮತ್ತು ಇತರ ಸಂಘಟನೆಗಳ ಅಭೂತಪೂರ್ವ ಒಕ್ಕೂಟದೊಂದಿಗೆ ಈ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಹಾಗೂ ಹಲವು ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಕಳೆಗಟ್ಟಲಿದೆ.

ನಮ್ಮ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಹರೀಶ್‌ಕುಮಾರ್ ಶೆಟ್ಟಿ, ರಾಜ್ಯ ಸಂಯೋಜಕ ಜಗದೀಶ್ ಅಧಿಕಾರಿ ಹಾಗೂ ಅವರ ಇಡೀ ತಂಡ ಸಮಾರಂಭದ ಯಶಸ್ಸಿಗೆ ಅವಿಶ್ರಾಂತವಾಗಿ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಅವರೆಲ್ಲರೂ ಉಭಯ ಜಿಲ್ಲೆಗಳ ಪ್ರಮುಖರನ್ನು ಖುದ್ದಾಗಿ ಭೇಟಿಯಾಗಿ ಆಹ್ವಾನಿಸುತ್ತಿರುವುದು ಮತ್ತು ಬ್ಯಾನ್‌ರ್‌ಗಳ ಮೂಲಕ ಉತ್ತಮ ಪ್ರಚಾರ ನೀಡುತ್ತಿರುವುದು ಕಾರ್ಯಕ್ರಮದ ಯಶಸ್ಸಿನ ಮುನ್ಸೂಚನೆಯಾಗಿದೆ.
ಈ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಲು ನಿಮ್ಮೆಲ್ಲರ ಪ್ರೀತಿಯ ಉಪಸ್ಥಿತಿ ಹಾಗೂ ಸದಾಕಾಲದ ಸಹಕಾರವನ್ನು ಹೃದಯಪೂರ್ವಕವಾಗಿ ಕೋರುತ್ತೇವೆ” ಎಂದರು.
ಸಮಿತಿಯ ಗೌರವ ಕೋಶಾಧಿಕಾರಿ ಸದಾನಂದ ಎನ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿ ಉಪಾಧ್ಯಕ್ಷರುಗಳಾದ ಪಿ ಧನಂಜಯ ಶೆಟ್ಟಿ, ಸಿಎ ಐ.ಆರ್ .ಶೆಟ್ಟಿ, ಡಾ. ಸುರೇಂದ್ರ ಕುಮಾರ್ ಹೆಗ್ಡೆ , ಡಾ. ವಿಜಯಕುಮಾರ್ ಶೆಟ್ಟಿ, ಅಡ್ವಕೇಟ್ ಆರ್ ಎಂ ಭಂಡಾರಿ ಶ್ರೀನಿವಾಸ್ ಸಪಲ್ಯ , ಗಿರೀಶ್ ಬಿ ಸಾಲಿಯನ್, ಮಾಜಿ ಅಧ್ಯಕ್ಷ ಧರ್ಮಪಾಲ್ ದೇವಾಡಿಗ, ಗೌರವ ಕಾರ್ಯದರ್ಶಿ ಹ್ಯಾರಿ ಸೀಕ್ವೆರಾ , ಗೌರವ ಜೊತೆ ಕೋಶಾಧಿಕಾರಿಗಳಾದ ತೋನ್ಸೆ ಸಂಜೀವ ಪೂಜಾರಿ , ಮಹೇಶ್ ಕಾರ್ಕಳ ,ರಾಕೇಶ್ ಭಂಡಾರಿ, ಸಲಹೆಗಾರರಾದ ರಮಾನಂದ ರಾವ್, ಲಕ್ಷ್ಮಣ್ ಪೂಜಾರಿ, ಸದಸ್ಯರುಗಳಾದ ಡಾ. ಪ್ರಭಾಕರ್ ಶೆಟ್ಟಿ ಬೋಳ, ತೋನ್ಸೆ ಅಶೋಕ್ ಕುಮಾರ ಶೆಟ್ಟಿ,, ಅಡ್ವಕೇಟ್ ಸಂತೋಷ್ ಕುಮಾರ್ ಹೆಗ್ಡೆ, ಅಡ್ವಕೇಟ್ ದಯಾನಂದ್ ಶೆಟ್ಟಿ, ಕರುಣಾಕರ್ ಹೆಜಮಾಡಿ, ಕೃಷ್ಣಕುಮಾರ್ ಎನ್ ಬಂಗೇರ ,ಸಂತೋಷ್ ರೈ ಬೆಳ್ಳಿಪಾಡಿ, ಜಯರಾಮ್ ಶೆಟ್ಟಿ , ಅಡ್ವೊಕೇಟ್ ಡಿ ಕೆ ಶೆಟ್ಟಿ, ಅಡ್ವಕೇಟ್ ಗುಣಾಕರ್ ಶೆಟ್ಟಿ, ಚಿತ್ರಾಪು ಕೆ ಎಂ ಕೋಟ್ಯಾನ್, ಲೋಕನಾಥ್ ಪೂಜಾರಿ, ದಿವಾಕರ ಶೆಟ್ಟಿ ಪೋಸ್ರಾಲ್ ಉಪಸ್ಥಿತರಿದ್ದರು.




