ಮೆಹತಾ ಕಾಲೇಜು ನವಿ ಮುಂಬಯಿಯಲ್ಲಿ ಕನ್ನಡಿಗರ ಹೆಮ್ಮೆಯ ಪ್ರತಿಷ್ಠಿತ ಸಂಸ್ಥೆ – ಮುಖ್ಯ ಅತಿಥಿ ಸತೀಶ ಮಾನೆಶಿಂಧೆ
ಶನಿವಾರ 29ರಂದು ಮೆಹತಾ ಮಹಾವಿದ್ಯಾಲಯದ ಸಭಾಭವನದಲ್ಲಿ ರಜತ ಮಹೋತ್ಸವ ಸಮಾರೋಪ ಸಮಾರಂಭವು ವಿಜೃಂಭಣೆಯಿಂದ ನೆರವೇರಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಶ್ರೀ ಸತೀಶ ಮಾನೆಶಿಂಧೆ ಮತ್ತು ಗೌರವ ಅತಿಥಿಗಳಾಗಿ NMMCಯ ನಿವೃತ್ತ ಹೆಚ್ಚುವರಿ ಆಯುಕ್ತ ಡಾ. ಅಂಬರೀಶ ಪಟ್ನಿಗೇರಿ ಅವರು ಆಗಮಿಸಿದ್ದರು.
ಗಣ್ಯರಿಂದ ದೀಪಪ್ರಜ್ವಲನದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದ ಆರಂಭದಲ್ಲಿ, ಮೆಹತಾ ಕಾಲೇಜು ಸಾಗಿ ಬಂದ ಹಾದಿಯ ಕಿರು ವೀಡಿಯೊವನ್ನು ಪ್ರದರ್ಶಿಸಲಾಯಿತು. ಇದರಲ್ಲಿ ಕಾಲೇಜಿನ ಮೂಲಸೌಕರ್ಯಗಳು, ವಿದ್ಯಾರ್ಥಿಗಳ ಆಟಪಾಠ, ಪಠ್ಯೇತರ ಚಟುವಟಿಕೆಗಳು, NSS ಹಾಗೂ DLLE ಹಮ್ಮಿಕೊಂಡಿರುವ ಸಾಮಾಜಿಕ ಸೇವೆ, ವಿವಿಧ ಶೈಕ್ಷಣಿಕ ವಿಭಾಗಗಳ ಸ್ಪರ್ಧಾತ್ಮಕ ಮತ್ತು ಸಂಶೋಧನಾ ಚಟುವಟಿಕೆಗಳು ಸೇರಿದಂತೆ ಕಾಲೇಜಿನ ಸಂಪೂರ್ಣ ಮಾಹಿತಿಯನ್ನು ಸಭಿಕರಿಗೆ ಪರಿಚಯಿಸಲಾಯಿತು.

ಸಭಾ ಕಾರ್ಯಕ್ರಮವು ಪ್ರಾಚಾರ್ಯ ಡಾ. ಬಿ. ಆರ್. ದೇಶಪಾಂಡೆ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ಗಣ್ಯರನ್ನು ಪುಷ್ಪಗುಚ್ಛ, ಸ್ಮರಣಿಕೆ ಹಾಗೂ ಶಾಲು ಹೊದಿಸಿ ಆತ್ಮೀಯವಾಗಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಶ್ರೀ ಕೃಷ್ಣಾ ದೇಶಪಾಂಡೆ ಅವರು ಮಾತನಾಡುತ್ತಾ, “ಜ್ಞಾನ ವಿಕಾಸ ಮಂಡಲವು ಎರಡು ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಸರುವಾಸಿಯಾಗಿದೆ. ನರ್ಸರಿಯಿಂದ ಸ್ನಾತಕೋತ್ತರ ಹಂತದವರೆಗಿನ ತರಗತಿಗಳು ನಮ್ಮ ಸಂಸ್ಥೆಯಲ್ಲಿ ನಡೆಯುತ್ತಿದ್ದು, ವಿದ್ಯಾರ್ಥಿಗಳ ಪ್ರವೇಶ ಶುಲ್ಕವು ಪಾಲಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗಿದೆ,” ಎಂದು ತಿಳಿಸಿದರು.
ಗೌರವ ಅತಿಥಿ ಡಾ. ಅಂಬರೀಶ ಪಟ್ನಿಗೇರಿ ಅವರು ಮಾತನಾಡಿ, “ಕಾಲೇಜಿನಲ್ಲಿ ಹೊಸ ಕೋರ್ಸ್ಗಳನ್ನು ಆರಂಭಿಸಿ, ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಶಿಕ್ಷಣ ಒದಗಿಸಲು ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಲು ನಾನು ಸಿದ್ಧನಿದ್ದೇನೆ. ಸಂಸ್ಥೆಯು ಸ್ವಾಯತ್ತತೆ ಪಡೆದು ಶಿಕ್ಷಣ ಕ್ಷೇತ್ರದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಬೆಳೆಯಲಿ,” ಎಂದು ಹಾರೈಸಿದರು.
ಮುಖ್ಯ ಅತಿಥಿ ನ್ಯಾಯವಾದಿ ಶ್ರೀ ಸತೀಶ ಮಾನೆಶಿಂಧೆ ಮಾತನಾಡಿ, “ಮೆಹತಾ ಕಾಲೇಜು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಹೆಸರು ಗಳಿಸಿದ್ದು, ಕನ್ನಡಿಗನಾಗಿ ಇದು ನನಗೆ ಅತ್ಯಂತ ಹೆಮ್ಮೆಯ ಸಂಗತಿ. ಕಾಲೇಜಿನಲ್ಲಿ ಕಾನೂನು ವಿಭಾಗವನ್ನು (Law College) ಪ್ರಾರಂಭಿಸಲು ಅಗತ್ಯ ಸಲಹೆ-ಸಹಕಾರ ನೀಡುತ್ತೇನೆ. ಸಮಾಜ ಹಾಗೂ ಶಿಕ್ಷಣ ಕ್ಷೇತ್ರದ ಸೇವೆಗಾಗಿ ಸದಾ ಸಮಯ ಮೀಸಲಿಡಲು ನಾನು ಬದ್ಧ,” ಎಂದು ಹೇಳಿದರಲ್ಲದೆ, “ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಹೆಚ್ಚಿನ ಮಹತ್ವ ನೀಡಿ, ಉನ್ನತ ವಿಚಾರಗಳನ್ನು ಮೈಗೂಡಿಸಿಕೊಂಡು ಗುರಿ ತಲುಪಬೇಕು,” ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ವಿ. ಎನ್. ಹೆಗಡೆ ಅವರು, “ಕಳೆದ 25 ವರ್ಷಗಳ ಸುದೀರ್ಘ ಅವಧಿಯಲ್ಲಿ ಕೇವಲ ಪಠ್ಯ ಬೋಧನೆಯಷ್ಟೇ ಅಲ್ಲದೆ ವ್ಯಕ್ತಿತ್ವ ವಿಕಸನ, ಶಿಸ್ತು, ವಿನಯ ಹಾಗೂ ಸೇವಾ ಮನೋಭಾವ ಸೇರಿದಂತೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುವುದು ನಮ್ಮ ಸಂಸ್ಥೆಯ ಬದ್ಧತೆಯಾಗಿದೆ. ಮೆಹತಾ ಕಾಲೇಜು ಇಂದು ಮುಂಚೂಣಿಯಲ್ಲಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಮೊದಲ ಆದ್ಯತೆ ನೀಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಸ್ವಾಯತ್ತತೆ ಪಡೆದು ವಿವಿಧ ಕೌಶಲ್ಯಪೂರ್ಣ ತರಗತಿಗಳನ್ನು ಪ್ರಾರಂಭಿಸುವ ಯೋಜನೆ ರೂಪಿಸಲಾಗಿದೆ,” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ 2001ರಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಪ್ರಾಧ್ಯಾಪಕಿ ಉಜ್ವಲಾ ಪವಾರ್, ಪ್ರಯೋಗಾಲಯ ಸಹಾಯಕ ನಿಖೇಶ್ ಶಿರ್ಕೆ ಹಾಗೂ ಸಹಾಯಕ ಸುರೇಶ್ ಕಾಂಬಳೆ ಅವರನ್ನು ಗಣ್ಯರು ಸನ್ಮಾನಿಸಿದರು.
ವೇದಿಕೆಯಲ್ಲಿ ಜ್ಞಾನ ವಿಕಾಸ ಮಂಡಲದ ಉಪಾಧ್ಯಕ್ಷ ಶ್ರೀ ಎಸ್. ಪಿ. ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶ್ರೀ ವ್ಯಾಸಮೂರ್ತಿ ಮುಗಳಿ, ಕೋಶಾಧಿಕಾರಿ ಶ್ರೀ ಅವಿನಾಶ ಖಿಲಾರಿ ಹಾಗೂ ಉಪಪ್ರಾಚಾರ್ಯ ಎನ್. ಕೆ. ಪಾಟೀಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರಮೇಶ್ ಪಾಟೀಲ, ಸತೀಶ ಖಿಲಾರಿ, ಪಾಂಡುರಂಗ ಮಿರ್ಜಿ, ಆರ್. ಜಿ. ಪಾಟೀಲ, ಸಮೀರ ಟಂಕಸಾಲಿ, ರಾಹುಲ್ ಮಾಂಗಲೆ, ಅವಧೂತ ಅಕ್ಲೇಕರ; ಮಂಡಲದ ಸದಸ್ಯರಾದ ಶ್ರೀ ಶಿವಾಜಿ ಪುರಿ, ಶ್ರೀಮತಿ ಗಾಯತ್ರಿ ಕುಲಕರ್ಣಿ, ಶ್ರೀ ಸ್ವಪ್ನಿಲ್ ಬೂಟ್ಕರ, ಶ್ರೀ ರೋಹಿತ ಹರಗಬಾಳ, ಸಾಗರ ದೇಶಪಾಂಡೆ, ಶ್ರೀ ಯು. ಪಿ. ಬೂಟ್ಕರ, ಶ್ರೀ ರೋಹಿತ ಮಾಂಗಲೆ, ಶ್ರೀ ಸಚಿನ್ ಹೆಗಡೆ; ಆಮಂತ್ರಿತ ಗಣ್ಯರಾದ ಶ್ರೀ ವಸಂತ ಭಟ್, ಶ್ರೀ ಪ್ರಹ್ಲಾದ ಪಾರ್ವತಿಕರ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಾಧ್ಯಾಪಕಿಯರಾದ ಡಾ. ರಶ್ಮಿ ಲೆಂಗಾಡೆ ಮತ್ತು ಡಾ. ಜಯಾ ಆನಂದ್ ಕಾರ್ಯಕ್ರಮ ನಿರೂಪಿಸಿದರು. ಸಿಂಧು ರಮಣಿ ಹಾಗೂ ಜಾಹ್ನವಿ ಕ್ಷೀರಸಾಗರ ಅತಿಥಿಗಳನ್ನು ಪರಿಚಯಿಸಿದರು. ರಜತ ಮಹೋತ್ಸವ ಸಮಿತಿಯ ಸಂಚಾಲಕ ಹಾಗೂ ಸಹ ಪ್ರಧಾನ ಕಾರ್ಯದರ್ಶಿ ಜಾನ್ ಪಿ. ಥಾಮಸ್ ವಂದನಾರ್ಪಣೆ ಮಾಡಿದರು.




