
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳೇ ಸಮಾಜೋನ್ನತಿಗೆ ದಾರಿದೀಪ: ಹರೀಶ್ ಜಿ. ಅಮೀನ್
ಚಿತ್ರ: ಧನಂಜಯ ಪೂಜಾರಿ, ವರದಿ: ಇನ್ನಂಜೆ ಜಯರಾಮ್
ಮುಂಬೈ: “ಮಹಾನ್ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಶ್ವಮಾನವ ಸಂದೇಶಗಳು ಹಾಗೂ ಸಮಾನತೆಯ ಆದರ್ಶಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸದಾ ದಾರಿದೀಪ. ಸಂಸ್ಥೆಯು ಕೈಗೆತ್ತಿಕೊಂಡಿರುವ ಮಹತ್ವಾಕಾಂಕ್ಷೆಯ ಶಿಕ್ಷಣ ಸಂಸ್ಥೆಯ ನಿರ್ಮಾಣ ಯೋಜನೆಗೆ ಸಮಾಜ ಬಾಂಧವರೆಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು” ಎಂದು ಬಿಲ್ಲವರ ಅಸೋಸಿಯೇಷನ್ ಮುಂಬೈ ಅಧ್ಯಕ್ಷ ಹರೀಶ್ ಜಿ. ಅಮೀನ್ ಕರೆ ನೀಡಿದರು.
ಇಲ್ಲಿನ ಕಲ್ವಾ ಪಶ್ಚಿಮದ ಖಾರೇಗಾವ್ ಎಂ.ಪಿ. ರೋಡ್ ರೇತಿಬಂದರ್ ನಾಕಾ ಸಮೀಪದ ಪಾರ್ಸಿಕ್ ನಗರದಲ್ಲಿರುವ ಹೋಟೆಲ್ ಅಮಿತ್ ಗಾರ್ಡನ್ ಸಭಾಂಗಣದಲ್ಲಿ, ಬಿಲ್ಲವರ ಅಸೋಸಿಯೇಷನ್ ಮುಂಬೈ ಕಲ್ವಾ ಸ್ಥಳೀಯ ಕಚೇರಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಬಿಲ್ಲವರ ಅಸೋಸಿಯೇಷನ್ ಮುಂಬೈ ಸಂಸ್ಥೆಯು ಕಳೆದ ಐದು ವರ್ಷಗಳಿಂದ ಗುರುಗಳ ಆದರ್ಶಗಳನ್ನೇ ತತ್ವವನ್ನಾಗಿಸಿಕೊಂಡು ಮುನ್ನಡೆಯುತ್ತಿದೆ. ಸಂಸ್ಥೆಯ ಒಟ್ಟು ಆದಾಯದ ಶೇಕಡಾ 80 ರಿಂದ 90ರಷ್ಟನ್ನು ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸಲಾಗುತ್ತಿದ್ದು, ಯಾವುದೇ ಜಾತಿ-ಮತ ಭೇದವಿಲ್ಲದೆ ಎಲ್ಲ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸುಸಜ್ಜಿತ ಶಿಕ್ಷಣ ಸಂಸ್ಥೆ ಹಾಗೂ ಸಮುದಾಯ ಭವನವನ್ನು ಸಾಕಾರಗೊಳಿಸುವ ಬೃಹತ್ ಸಂಕಲ್ಪ ಹೊಂದಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಜಾಗ ಮತ್ತು ಅನುದಾನ ಕ್ರೋಡೀಕರಣಕ್ಕೆ ಚಾಲನೆ ನೀಡಲಾಗಿದೆ. ಸಮುದಾಯದ ಪ್ರತಿಯೊಬ್ಬರೂ ತನು-ಮನ-ಧನದ ನೆರವಿನೊಂದಿಗೆ ಈ ವಿದ್ಯಾ ಸಂಸ್ಥೆಯ ಸಾಕಾರಕ್ಕೆ ಕೈಜೋಡಿಸಬೇಕು” ಎಂದು ಅಧ್ಯಕ್ಷರು ಮನವಿ ಮಾಡಿದರು.

ಘೋಡ್‌ಬಂದರ್ ರೋಡ್ ಕನ್ನಡ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಮಾತನಾಡಿ, “ಹರೀಶ್ ಡಿ. ಸಾಲ್ಯಾನ್ ಅವರ ಸಂಘಟನಾ ಚಾತುರ್ಯ ಹಾಗೂ ಕಲ್ವಾ ಸ್ಥಳೀಯ ಸಮಿತಿಯ ಸಮಾಜಮುಖಿ ಕಾರ್ಯವೈಖರಿ ಸಮುದಾಯದ ಕೀರ್ತಿಯನ್ನು ಹೆಚ್ಚಿಸಿದೆ” ಎಂದು ಶ್ಲಾಘಿಸಿದರು.
ಠಾಣೆ ಹೋಟೆಲ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಪೊಲ್ಯ ಉಮೇಶ್ ಶೆಟ್ಟಿ ಮಾತನಾಡಿ, “ಸ್ವಾಮಿ ವಿವೇಕಾನಂದರು ಸಾರಿದ ಜಾಗೃತಿಯ ಸಂದೇಶವನ್ನು ಮುಂದುವರಿಸಿದ ನಾರಾಯಣ ಗುರುಗಳ ಚಿಂತನೆಗಳು ಸರ್ವಕಾಲಿಕ. ಸಮಾಜವನ್ನು ಜಾಗೃತಗೊಳಿಸಿ ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಬಿಲ್ಲವ ಸಂಘದಂತಹ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದು” ಎಂದು ನುಡಿದರು.

ಗುರುಗಳ ತತ್ವದಡಿ ಸಮಾಜಮುಖಿ ಸೇವೆ: ಹರೀಶ್ ಸಾಲ್ಯಾನ್ ಬಜಗೋಳಿ
ಕಲ್ವಾ (ಮುಂಬೈ): ಮಹಾನ್ ಸಮಾಜ ಸುಧಾರಕ, ವಿಶ್ವಮಾನವ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಸಮಾಜಕ್ಕೆ ಸದಾ ದಾರಿದೀಪವಾಗಿವೆ ಎಂದು ಬಿಲ್ಲವರ ಅಸೋಸಿಯೇಷನ್ ಮುಂಬೈನ ಕಲ್ವಾ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಹರೀಶ್ ಡಿ. ಸಾಲ್ಯಾನ್ ಬಜಗೋಳಿ ಅಭಿಪ್ರಾಯಪಟ್ಟರು. ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಹಾಗೂ ‘ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಶಾಲಿಯಾಗಿ’ ಎಂಬ ನಾರಾಯಣ ಗುರುಗಳ ದಿವ್ಯ ಸಂದೇಶದ ಅಡಿಯಲ್ಲೇ ಸಮಿತಿಯ ಸಮಾಜಮುಖಿ ಚಟುವಟಿಕೆಗಳು ಮುನ್ನಡೆಯುತ್ತಿವೆ. ಕಲ್ವಾದಲ್ಲಿ ಅಧ್ಯಕ್ಷ ಸ್ಥಾನ ಎಂಬುದು ಕೇವಲ ಹುದ್ದೆ ಅಥವಾ ಕಿರೀಟವಲ್ಲ, ಅದೊಂದು ನಿರಂತರ ಸಮಾಜ ಸೇವೆಯ ಜವಾಬ್ದಾರಿ. ತಾರುಣ್ಯದಿಂದಲೇ ಸಮಾಜ ಸೇವೆ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಬಂದಿದ್ದು, ಗುರುಗಳ ಕೃಪೆಯಿಂದ ಈ ಜವಾಬ್ದಾರಿಯನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದರು.
ಕಲ್ವಾದ ಗುರು ಮಂದಿರವು ಸಾರ್ವಜನಿಕರ ಶ್ರದ್ಧಾ ಕೇಂದ್ರವಾಗಿದ್ದು, ಯಾವುದೇ ಭೇದ-ಭಾವವಿಲ್ಲದೆ ಭಕ್ತರು ಯಾವುದೇ ಸಮಯದಲ್ಲಾದರೂ ಬಂದು ಪ್ರಾರ್ಥನೆ ಸಲ್ಲಿಸಬಹುದು. ಇಲ್ಲಿನ ಸಮಿತಿಯು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕಾರ್ಯಕರ್ತರ ಒಗ್ಗಟ್ಟು, ನಿಸ್ವಾರ್ಥ ಶ್ರಮ ಮತ್ತು ಭಕ್ತರ ಪ್ರೋತ್ಸಾಹ ದೊಡ್ಡದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಹಿರಿಯ ಕಾರ್ಯಕರ್ತರು, ಯುವಕರು ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳು ಸಂಘಟನೆಯ ಏಳಿಗೆಗೆ ತೋರುತ್ತಿರುವ ಬದ್ಧತೆಯನ್ನು ಅವರು ಶ್ಲಾಘಿಸಿದರು.
.



ಸಾಧಕರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಕೋಶಾಧಿಕಾರಿ ಆನಂದ್ ಬಂಗೇರ ದಂಪತಿ, ಉಪ ಕಾರ್ಯಾಧ್ಯಕ್ಷ ಉಮೇಶ್ ಟಿ. ಕರ್ಕೇರ ದಂಪತಿ, ಅರ್ಚಕ ಪ್ರವೀಣ್ ಸಾಲ್ಯಾನ್ ದಂಪತಿ, ಕಾರ್ಯಕರ್ತೆ ಲೀಲಾ ಕರುಣಾಕರ್ ಪೂಜಾರಿ ದಂಪತಿ ಹಾಗೂ ಹಿರಿಯ ಕಾರ್ಯಕರ್ತೆ ರುಕ್ಮಿಣಿ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ವೇದಿಕೆಯಲ್ಲಿ ಠಾಣೆಯ ಮಾಜಿ ಮೇಯರ್ ಹಾಗೂ ನಗರಸೇವಕಿ ಮೀನಾಕ್ಷಿ ಶಿಂದೆ, ರಘುರಾಮ್ ರಾಯ್, ವಿಹಾಂಗ್ ರತ್ನಾಕರ್ ಶೆಟ್ಟಿ, ಉದ್ಯಮಿ ಮೋಹನ್ ಗೌಡ, ಅಂತೆಯೇ, ಬಿಲ್ಲವರ ಅಸೋಸಿಯೇಷನ್ ಮುಂಬೈನ ಉಪಾಧ್ಯಕ್ಷ ಹಾಗೂ ಕೇಂದ್ರ ಕಚೇರಿ ಉಸ್ತುವಾರಿ ಪುರುಷೋತ್ತಮ ಎಸ್. ಕೋಟ್ಯಾನ್, ಉಪಾಧ್ಯಕ್ಷ ಕೆ. ಸುರೇಶ್ ಕುಮಾರ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರವಿ ಎಸ್. ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರ್, ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ್ ಜಿ. ಅಂಚನ್, ಗೌರವ ಕಾರ್ಯದರ್ಶಿ ಸದಾಶಿವ್ ವೈ. ಕೋಟ್ಯಾನ್, ಮಾಜಿ ಉಪಾಧ್ಯಕ್ಷ ರಾಜ ವಿ. ಸಾಲ್ಯಾನ್, ಘೋಡ್‌ಬಂದರ್ ರೋಡ್ ಕನ್ನಡ ಅಸೋಸಿಯೇಷನ್ ಜೊತೆ ಕಾರ್ಯದರ್ಶಿ ವಸಂತ್ ಸಾಲ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಂದನಾ ಡಿ. ಶೆಟ್ಟಿ, ಭಾಂಡುಪ್ ಕಾರ್ಯಾಧ್ಯಕ್ಷ ಜನಾರ್ಧನ್ ಪೂಜಾರಿ, ಮುಲುಂಡ್ ಕಾರ್ಯಾಧ್ಯಕ್ಷ ಶಂಕರ್ ಅಮೀನ್, ಡೊಂಬಿವಲಿ ಸ್ಥಳೀಯ ಕಚೇರಿಯ ಸುಭಾಷ್ ಪಾಲನ್, ಠಾಣೆ ಸ್ಥಳೀಯ ಕಚೇರಿಯ ಕೋಶಾಧಿಕಾರಿ ನಾರಾಯಣರಾಮ್ ಪೂಜಾರಿ, ಹೋಟೆಲ್ ಉದ್ಯಮಿ ಜಯಾನಂದ್ ಪೂಜಾರಿ, ಕಿಸನ್ ನಗರ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಜಯರಾಮ್ ಪೂಜಾರಿ ಉಪಸ್ಥಿತರಿದ್ದರು.
ಗೌರವ ಪ್ರಧಾನ ಕೋಶಾಧಿಕಾರಿ ರವಿ ಎಸ್. ಸನಿಲ್ ಕಾರ್ಯಕ್ರಮ ನಿರೂಪಿಸಿದರು.

ಧಾರ್ಮಿಕ ಸಂಭ್ರಮ: ಮುಂಜಾನೆ ದೀಪ ಪ್ರಜ್ವಲನೆಯ ನಂತರ ಅರ್ಚಕರಾದ ಕರುಣಾಕರ್ ಸಿ. ಬಂಗೇರ, ಸಂತೋಷ್ ಎಸ್. ಸುವರ್ಣ ಹಾಗೂ ಪ್ರವೀಣ್ ಸಾಲ್ಯಾನ್ ಅವರ ಪೌರೋಹಿತ್ಯದಲ್ಲಿ ಗಣಪತಿ ಹೋಮ, ಗುರುಪೂಜೆ, ಗುರು ಸ್ತೋತ್ರ ಪಠಣ ಹಾಗೂ ಪುಣ್ಯವಾಚನ ಶಾಸ್ತ್ರೋಕ್ತವಾಗಿ ಜರುಗಿದವು. ಭಕ್ತಾದಿಗಳಿಂದ ಭಜನಾ ಸಂಕೀರ್ತನೆ, ಕುಣಿತ ಭಜನೆ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿಯ ನಂತರ ತೀರ್ಥ ಪ್ರಸಾದ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.

ಕಾರ್ಯಕ್ರಮದ ಯಶಸ್ಸಿಗೆ ಕಲ್ವಾ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷರಾದ ಬಿ.ಸಿ. ಅಮೀನ್, ಆರ್.ಕೆ. ಅಮೀನ್, ಗೌರವ ಕಾರ್ಯದರ್ಶಿ ಮಮತಾ ಎಂ. ಅಮೀನ್, ಜೊತೆ ಕಾರ್ಯದರ್ಶಿ ಪ್ರಕಾಶ್ ಜಿ. ಪೂಜಾರಿ, ಜೊತೆ ಕೋಶಾಧಿಕಾರಿ ಸುಕನ್ಯಾ ಸಿ. ಪೂಜಾರಿ, ಸ್ಥಳೀಯ ಸಮಿತಿ ಸದಸ್ಯ ವಿಕಾಸ್ ಹಾಗೂ ಮಹಿಳಾ ಮತ್ತು ಯುವ ವಿಭಾಗದ ಸದಸ್ಯರು ಸಹಕರಿಸಿದರು.




