
”ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದೇ ಅತ್ಯಂತ ಶ್ರೇಷ್ಠ ಹಾಗೂ ಆತ್ಮತೃಪ್ತಿಯ ಕಾರ್ಯ” : ಸುರೇಶ್ ಕಾಂಚನ್
ಚಿತ್ರ ವರದಿ: ದಿನೇಶ್ ಕುಲಾಲ್
ಮುಂಬಯಿ: “ಸ್ಕಾಲರ್‌ಶಿಪ್ ಮತ್ತು ಪುಸ್ತಕ ವಿತರಣೆಯಂತಹ ಹಲವಾರು ಕಾರ್ಯಕ್ರಮಗಳನ್ನು ನಾವು ಮಾಡುತ್ತೇವೆ. ಆದರೆ ನನಗೆ ಅತ್ಯಂತ ಆತ್ಮತೃಪ್ತಿ ನೀಡಿದ ಕೆಲಸವೆಂದರೆ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವುದು. ಎಷ್ಟೋ ಸನ್ಮಾನ-ಸತ್ಕಾರಗಳನ್ನು ನಾವು ಪಡೆದಿರಬಹುದು, ಆದರೆ ಈ ಕೆಲಸ ಮಾಡುವಾಗ ಸಿಗುವ ಮನಸ್ಸಿನ ತೃಪ್ತಿ ಇದೆಯಲ್ಲ, ಅದು ಅತ್ಯಂತ ಶ್ರೇಷ್ಠವಾದದ್ದು. ‘ಏನೋ ಒಂದು ದೊಡ್ಡ ಕಾರ್ಯಕ್ಕಾಗಿ, ಹಣವನ್ನು ನಾವು ಸರಿಯಾಗಿ ವಿನಿಯೋಗಿಸುತ್ತಿದ್ದೇವೆ’ ಎಂಬ ಭಾವನೆ ಮೂಡುತ್ತದೆ. ಇಂದು ಮುಕೇಶ್ ಹಾಗೂ ಸುಧಾಕರ್ ಅವರು ನನ್ನ ಬಳಿ ಹೇಳಿದರು, ಮುಂಬೈ ನಗರದಲ್ಲಿ ಕುಂದಾಪುರ ಮೂಲದ ಕಡುಬಡ ಮಕ್ಕಳಿದ್ದಾರೆ. ಪ್ರತಿಯೊಬ್ಬರ ಮನೆಗೂ ಹೋಗಿ ಪರಿಶೀಲಿಸಿದ್ದೇವೆ; ಸಣ್ಣ ಮನೆಯಲ್ಲಿ ನಾಲ್ಕೈದು ಜನರಿದ್ದಾರೆ ಎಂದು. ನಿಜವಾಗಲೂ ಇದನ್ನು ಕೇಳುವಾಗ ರೋಮಾಂಚನವಾಗುತ್ತದೆ. ಇಂದು ಕೂಡ ಮುಂಬೈನಲ್ಲಿ ಇಂತಹ ಪರಿಸ್ಥಿತಿ ಇದೆ ಎನ್ನುವುದು ತಿಳಿದವರಿಗೆ ಮಾತ್ರ ಗೊತ್ತು; ಎಲ್ಲರಿಗೂ ಇದು ಗೊತ್ತಿಲ್ಲ. ಏಕೆಂದರೆ, ಶ್ರೀಮಂತರ ಮನೆಯಲ್ಲಿ ಮಕ್ಕಳು ಹುಟ್ಟುವಾಗಲೇ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿರುತ್ತಾರೆ. ಅವರಿಗೆ ಈ ಕಷ್ಟಗಳ ಅನುಭವವಿರುವುದಿಲ್ಲ. ಅದಕ್ಕಾಗಿಯೇ ಯಾರು ಕಷ್ಟಪಟ್ಟಿದ್ದಾರೋ, ಅವರಿಗೆ ಹಣದ ಬೆಲೆ, ವಿದ್ಯೆಯ ಬೆಲೆ, ತಂದೆ-ತಾಯಿಯ ಬೆಲೆ, ಸಮಾಜದ ಬೆಲೆ ಹಾಗೂ ದೇಶದ ಬೆಲೆ ನಿಜವಾಗಿಯೂ ಗೊತ್ತಿರುತ್ತದೆ.
ಇಂದು ಕೋಟಿಗಟ್ಟಲೆ ಸಂಪಾದನೆ ಇರುವ ಸಂಸ್ಥೆಗಳು ಕೂಡ 5,000 ಅಥವಾ 10,000 ರೂಪಾಯಿಗಳನ್ನು ಮಾತ್ರ ನೀಡುತ್ತವೆ. ಆದರೆ, ಯಾವುದೇ ದೊಡ್ಡ ಆದಾಯವಿಲ್ಲದ ಈ ನಮ್ಮ ಸಂಸ್ಥೆಯು ಮಕ್ಕಳಿಗೆ 40,000 ರೂಪಾಯಿಗಳನ್ನು ಕೊಡುತ್ತಿದೆ ಎಂದರೆ ಅದು ನಿಜಕ್ಕೂ ಶ್ಲಾಘನೀಯ ಹಾಗೂ ಖುಷಿಯ ವಿಚಾರ.
ಆದರೆ ಇಂದು ನಾನು ಈ ಸಂಸ್ಥೆಗೆ ಒಂದು ಸಣ್ಣ ಕಿವಿಮಾತನ್ನು ಹೇಳಬಯಸುತ್ತೇನೆ. ನೀವು ಪ್ರತಿವರ್ಷ ಪ್ರತಿಯೊಬ್ಬರ ಬಳಿಯೂ ಹಣಕ್ಕಾಗಿ ವಿನಂತಿ ಮಾಡುವುದರಿಂದ, ಮುಂದಿನ ದಿನಗಳಲ್ಲಿ ಇದು ಅಸಾಧ್ಯವಾಗಬಹುದು. ಏಕೆಂದರೆ, ಇವತ್ತಿದ್ದವರು ನಾಳೆ ಅದೇ ಮನಸ್ಥಿತಿಯಲ್ಲಿ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ಈ ಸಂಸ್ಥೆಯು ಒಂದಿಷ್ಟು ಹಣವನ್ನು ಡೆಪಾಸಿಟ್ (ಖಾಯಂ ಜಮಾ) ಮಾಡಿ ಇಟ್ಟುಕೊಳ್ಳಬೇಕು. ಆ ಜಮೆಯಾದ ಹಣದಿಂದ ಬರುವ ಬಡ್ಡಿಯಲ್ಲಿ ಮಕ್ಕಳಿಗೆ ವಿದ್ಯಾದಾನ ಮಾಡುವಂತಹ ಸುಸಜ್ಜಿತ ವ್ಯವಸ್ಥೆಯನ್ನು ರೂಪಿಸಬೇಕು. ಈ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಹೊಂದಿ ದೊಡ್ಡ ಹೆಮ್ಮರವಾಗಿ ಬೆಳೆಯಬೇಕು. ಇದರ ಹಣ್ಣು, ಕಾಯಿ ಹಾಗೂ ನೆರಳಿನ ಫಲವು ಬಡ ಮಕ್ಕಳಿಗೆ ಸಿಗಬೇಕು ಎನ್ನುವುದೇ ನನ್ನ ಆಶಯ” ಎಂದು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮುಂಬೈ ಇದರ ಗೌರವಾಧ್ಯಕ್ಷ ಸುರೇಶ್ ಕಾಂಚನ್ ನುಡಿದರು.

ಅವರು ಜುಲೈ 19ರಂದು ಆದಿತ್ಯವಾರ ಸಂಜೆ ಅಂಧೇರಿ ಪಶ್ಚಿಮದ ವೀರ ದೇಸಾಯಿ ಮಾರ್ಗದಲ್ಲಿರುವ ಮೊಗವೀರ ಭವನದ ತಳಮಹಡಿಯಲ್ಲಿ ನಡೆದ ನೈನ್ ಹ್ಯಾಂಡ್ಸ್ ಫೌಂಡೇಶನ್ ನ ವಾರ್ಷಿಕ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಇನ್ನೋರ್ವ ಅತಿಥಿ, ಉದ್ಯಮಿ ಹಾಗೂ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮುಂಬೈ ಇದರ ಮಾಜಿ ಅಧ್ಯಕ್ಷ ಮಹಾಬಲ ಕುಂದರ್ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾ, “ಮುಕೇಶ್ ಬಂಗೇರ, ಹರೀಶ್ ಶ್ರೀಯಾನ್ ಮತ್ತು ಸುಧಾಕರ ಕರ್ಕೇರ ಅವರು ಮೊದಲಿಗೆ ನನ್ನ ಬಳಿ ಬಂದಾಗ, ಈ ನೈನ್ ಹ್ಯಾಂಡ್ಸ್ ಸಂಸ್ಥೆಯಲ್ಲಿ ಏನು ಮಾಡುತ್ತಾರೆ ಎಂಬುದು ನಮಗೂ ತಿಳಿದಿರಲಿಲ್ಲ. ಆದರೆ ಇಂದು ನಿಮ್ಮ ಈ ಸೇವೆಯನ್ನು ನೋಡಿ ನಿಜಕ್ಕೂ ಸಂತೋಷವಾಗುತ್ತಿದೆ. ಸುರೇಶ್ ಕಾಂಚನ್ ಅವರು ಹೇಳಿದಂತೆ, ಇಲ್ಲಿ ಒಂದು ನಯಾಪೈಸೆಯ ವೆಚ್ಚವೂ ಇಲ್ಲ. ಅತ್ಯಂತ ಸರಳವಾಗಿ, ಸಂಗ್ರಹವಾದ ಹಣದಲ್ಲಿ ಒಂದು ರೂಪಾಯಿಯನ್ನೂ ಅನಗತ್ಯವಾಗಿ ಪೋಲು ಮಾಡದೆ, ಸಂಪೂರ್ಣ ಹಣವನ್ನು ವಿದ್ಯಾರ್ಥಿಗಳಿಗೆ ಹಾಗೂ ಬಡ ಜನರಿಗೆ ನೀಡುತ್ತಿದ್ದಾರೆ. ಅದರಲ್ಲಿಯೂ ಅತ್ಯಂತ ಪಾರದರ್ಶಕವಾಗಿ ಪರಿಶೀಲನೆ ನಡೆಸಿ, ಪ್ರತಿಯೊಬ್ಬರ ಮನೆಗೂ ಹೋಗಿ ಅವರ ಪರಿಸ್ಥಿತಿಯನ್ನು ಕಂಡು, ಅರ್ಹ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿರುವುದು ನಿಜಕ್ಕೂ ಶ್ರೇಷ್ಠವಾದ ಕಾರ್ಯ. ವಿದ್ಯಾರ್ಥಿಗಳೇ, ಯಶಸ್ಸಿನ ಹಾದಿ ತಲುಪಲು ಯಾವುದೇ ಲಿಫ್ಟ್ ಇರುವುದಿಲ್ಲ; ನೀವು ಮೆಟ್ಟಿಲುಗಳನ್ನೇ ಹತ್ತಿ ಹೋಗಬೇಕು, ಪ್ರತಿಯೊಂದು ಹಂತವನ್ನೂ ಕ್ರಮಿಸಬೇಕು. ಇಂದು ನಿಮಗೆ ಸಿಕ್ಕಿರುವ ಈ ಹಣಕಾಸಿನ ನೆರವು ನಿಮ್ಮ ಭವಿಷ್ಯವನ್ನು ರೂಪಿಸಲು ಸಿಕ್ಕಿರುವ ದೊಡ್ಡ ಆಸರೆ. ಸಾಮಾನ್ಯವಾಗಿ ಇತರರು ನೀಡುವ ಸಹಾಯ ಕೇವಲ ಒಂದು ವರ್ಷಕ್ಕೆ ಸೀಮಿತವಾಗಿರುತ್ತದೆ. ಆದರೆ ಇಲ್ಲಿ ನಿಮ್ಮ ಇಡೀ ಶಿಕ್ಷಣದ ವೆಚ್ಚವನ್ನು ಈ ಸಂಸ್ಥೆ ಭರಿಸುತ್ತಿರುವುದು ಅತ್ಯಂತ ಶ್ರೇಷ್ಠ. ನಾವು ಸದಾ ನಿಮ್ಮೊಂದಿಗಿರುತ್ತೇವೆ,” ಎಂದು ನುಡಿದರು.

ಮೊಗವೀರ ಬ್ಯಾಂಕ್ ನ ಮಾಜಿ ಕಾರ್ಯಾಧ್ಯಕ್ಷ ಡಿ. ಡಿ. ಕರ್ಕೇರ ಅವರು ನೈನ್ ಹ್ಯಾಂಡ್ಸ್ ಫೌಂಡೇಶನ್ ನ ಸೇವಾ ಕಾರ್ಯಗಳನ್ನು ಮೆಚ್ಚಿ ಮಾತನಾಡಿದರು. ಬಳಿಕ ವೇದಿಕೆಯ ಗಣ್ಯರು ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯದ ಚೆಕ್ ವಿತರಿಸಿದರು.
ಪ್ರಾರಂಭದಲ್ಲಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಧ್ಯಕ್ಷ ಸಂತೋಷ್ ಕರ್ಕೇರ ಅವರು ಸರ್ವರನ್ನೂ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಹೇಮರಾಜ್ ಕಾಂಚನ್ ಅವರು ಸಂಸ್ಥೆಯ ಸುದೀರ್ಘ ಪಯಣ ಹಾಗೂ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ಕ್ರೂಟಿನಿ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಸಾಲ್ಯಾನ್ ಅವರು ಆರ್ಥಿಕ ಸಹಾಯಕ್ಕೆ ಅರ್ಹ ವಿದ್ಯಾರ್ಥಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಿದ ಪ್ರಕ್ರಿಯೆಯ ಕುರಿತು ವಿವರಣೆ ನೀಡಿದರು ಹಾಗೂ ಇಡೀ ಕಾರ್ಯಕ್ರಮವನ್ನು ಸುಲಲಿತವಾಗಿ ನಿರೂಪಿಸಿದರು.

ಸಂಸ್ಥೆಯ ಸ್ಥಾಪಕ ಟ್ರಸ್ಟಿ ಸುಧಾಕರ್ ಕರ್ಕೇರ, ಟ್ರಸ್ಟಿ ಮುಖೇಶ್ ಬಂಗೇರ ಹಾಗೂ ಕೋಶಾಧಿಕಾರಿ ಪ್ರಫುಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತುಕಾರಾಮ ಸಾಲ್ಯಾನ್ ವಂದನಾರ್ಪಣೆ ನೆರವೇರಿಸಿದರು. ಈ ಬಾರಿ ಮುಂಬೈ ಉಪನಗರ ಮಾತ್ರವಲ್ಲದೆ, ದೂರದ ವಿರಾರ್, ನಾಲಾಸೋಪರ, ಕಲ್ಯಾಣ್, ಡೊಂಬಿವಲಿಯಿಂದಲೂ ವಿದ್ಯಾರ್ಥಿಗಳು ಆಗಮಿಸಿ ಆರ್ಥಿಕ ನೆರವು ಪಡೆದುಕೊಂಡಿದ್ದು ವಿಶೇಷವಾಗಿತ್ತು.
40 ವಿದ್ಯಾರ್ಥಿಗಳಿಗೆ 12 ಲಕ್ಷ ರೂ. ವಿತರಣೆ
9 ಜನ ಸೇರಿ ಸ್ಥಾಪಿಸಿರುವ ಈ ಸಂಸ್ಥೆಯೊಂದಿಗೆ ಇದೀಗ ಅನೇಕರು ಕೈಜೋಡಿಸಿದ್ದಾರೆ. ಪ್ರಾರಂಭದಲ್ಲಿ ಒಬ್ಬ ವಿದ್ಯಾರ್ಥಿಗೆ ಸಹಕಾರ ನೀಡುವ ಮೂಲಕ ಆರಂಭಗೊಂಡ ಈ ಸಂಸ್ಥೆ, ಈ ವರ್ಷ ಕಡುಬಡತನದ ಕುಟುಂಬದ 40 ತುಳು-ಕನ್ನಡಿಗರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ತಲಾ 40,000 ರೂಪಾಯಿಯಂತೆ ಒಟ್ಟು 12 ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ವಿತರಿಸಿದೆ.





