
- ಶೇಖರ್ ಇಂದು ಸಾಲ್ಯಾನ್ ದಂಪತಿಗೆ ಸನ್ಮಾನ; ನಾಗರಾಜ್ ಹೆಜ್ಮಾಡಿ ಅವರ ಕೃತಿ ಲೋಕಾರ್ಪಣೆ
ಚಿತ್ರ: ಪ್ರಭಾಕರ್ ದೇವಾಡಿಗ, ವರದಿ: ಇನ್ನಂಜೆ ಜಯರಾಮ್
ಮುಂಬೈ: ‘ಸಮಾಜದಲ್ಲಿ ಸಮಸ್ಯೆಗಳು ಎದುರಾದಾಗ ಕೊರಗುತ್ತಾ ಕೂರದೆ, ಪರಿಹಾರ ಕಂಡುಕೊಳ್ಳುವ ಸಕಾರಾತ್ಮಕ ಚಿಂತನೆ ನಮ್ಮದಾಗಬೇಕು. ಆಗ ಮಾತ್ರ ಸಮಾಜ ಸದೃಢವಾಗಿ ಬೆಳೆಯಲು ಸಾಧ್ಯ. ಬ್ರಹ್ಮಶ್ರೀ ನಾರಾಯಣ ಗುರುಗಳ “ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ತತ್ವಾದರ್ಶ ಹಾಗೂ ಸಂಸ್ಕಾರಗಳನ್ನು ಯುವಪೀಳಿಗೆ ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ಹೇಳಿದರು.
ಬೋರಿವಲಿಯ ಜಯ ಸಿ. ಸುವರ್ಣ ಅಭಿಮಾನಿಗಳು, ಬಿಲ್ಲವ ಸಮಾಜ ಬಾಂಧವರು ಹಾಗೂ ಬೋರಿವಲಿ–ದಹಿಸರ್ ಶ್ರೀ ನಾರಾಯಣ ಗುರು ಭಜನ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಬೋರಿವಲಿ ಪೂರ್ವದ ಮಾಗಠಾಣೆಯ ದೇವಲ್ಪಾಡಾದ ‘ಓಂ ಶ್ರೀ ಜಗದೀಶ್ವರಿ ಸೇವಾ ಸಮಿತಿ ಜಗದೀಶ್ವರಿ ದೇವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿ’ಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಸಮಾಜ ಸಂಘಟನೆಯ ಹಾದಿಯಲ್ಲಿ ಹಿರಿಯರು ಹಾಕಿಕೊಟ್ಟ ನಿಸ್ವಾರ್ಥ ಬುನಾದಿ ಮರೆಯಲಾಗದ್ದು. ಸಮಾಜ ಗಟ್ಟಿಯಾಗಬೇಕಾದರೆ ಯುವಜನತೆಯನ್ನು ಮುಂಚೂಣಿಗೆ ತರಬೇಕು. ಕೇವಲ ಶಾಲೆ-ಕಾಲೇಜುಗಳ ಶಿಕ್ಷಣವಷ್ಟೇ ಸಾಲದು; ಮನೆಯಿಂದಲೇ ಬರುವ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಕಾರ ಯುವಕರಲ್ಲಿ ಬೆಳೆಯಬೇಕು. ಪ್ರತಿಯೊಬ್ಬರಲ್ಲೂ ಸಮಸ್ಯೆ ಪರಿಹರಿಸುವ ಮನೋಭಾವ ಬೆಳೆದಾಗ ಸಮಾಜದ ಸರ್ವತೋಮುಖ ಪ್ರಗತಿ ಸಾಧ್ಯ’ ಎಂದು ಅವರು ಪ್ರತಿಪಾದಿಸಿದರು.

ಗರಡಿಯ ಮುಕ್ತೇಸರ ಹಾಗೂ ಗೌರವ ಕಾರ್ಯಾಧ್ಯಕ್ಷ ಶೇಖರ್ ಇಂದು ಸಾಲ್ಯಾನ್ ಅವರು ಜ್ಯೋತಿ ಬೆಳಗಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುರೋಹಿತರಾದ ಶೇಖರ್ ಶಾಂತಿ ಹಾಗೂ ದಯಾನಂದ ಶಾಂತಿ ಅವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಗೂ ಮಹಾಮಂಗಳಾರತಿ ಸಂಪನ್ನಗೊಂಡಿತು.

ಕಳೆದ 53 ವರ್ಷಗಳ ಹಿಂದೆ ಮಹಾರಾಷ್ಟ್ರದ ನೆಲದಲ್ಲಿ ಗರಡಿ ಹಾಗೂ ಜಗದೀಶ್ವರಿ ದೇವಸ್ಥಾನವನ್ನು ಸ್ಥಾಪಿಸಿ ಸಮಾಜ ಸಂಘಟನೆಗೆ ಕಾರಣಕರ್ತರಾದ ಹಿರಿಯ ಚೇತನ ಶೇಖರ್ ಇಂದು ಸಾಲ್ಯಾನ್ ದಂಪತಿಯನ್ನು ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಲೇಖಕ ನಾಗರಾಜ್ ಹೆಜ್ಮಾಡಿ ಅವರ ‘ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತಾದ ಕೃತಿ’ಯನ್ನು ಲೋಕಾರ್ಪಣೆಗೊಳಿಸಲಾಯಿತು.

‘ನಾರಾಯಣ ಗುರುಗಳ ತತ್ವ ಸಂದೇಶ ಸಾರ್ವಕಾಲಿಕ: ಧನಂಜಯ ಶಾಂತಿ’
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ನಾರಾಯಣ ಗುರು ಭಜನ ಮಂಡಳಿಯ ಕಾರ್ಯಾಧ್ಯಕ್ಷ ಧನಂಜಯ ಶಾಂತಿ, ‘ಕೇರಳದಲ್ಲಿ ಅಸ್ಪೃಶ್ಯತೆ ಹಾಗೂ ಶೋಷಣೆ ತಾಂಡವವಾಡುತ್ತಿದ್ದ ಕಾಲದಲ್ಲಿ ಅವತರಿಸಿದ ನಾರಾಯಣ ಗುರುಗಳು ಸಮಾಜ ಸುಧಾರಣೆಗೆ ನಾಂದಿ ಹಾಡಿದರು. ಕುದ್ರೋಳಿ ಕ್ಷೇತ್ರದ ಮೂಲಕ ಎಲ್ಲ ವರ್ಗದವರಿಗೂ ಸಮಾನ ಪೂಜಾ ಹಕ್ಕು ಕಲ್ಪಿಸಿಕೊಟ್ಟ ಗುರುಗಳ ವಿಚಾರಗಳು ಸಾರ್ವಕಾಲಿಕ’ ಎಂದರು.
ಮುಖ್ಯ ಅತಿಥಿಯಾಗಿದ್ದ ಹೋಟೆಲ್ ಉದ್ಯಮಿ ಹಾಗೂ ಭಾರತ್ ಬ್ಯಾಂಕ್ ನಿರ್ದೇಶಕ ಸುರೇಶ್ ಸುವರ್ಣ ಮಾತನಾಡಿ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರ ಒಗ್ಗಟ್ಟು ಶ್ಲಾಘನೀಯ ಎಂದರು. ಉದ್ಯಮಿ ರಂಗಪ್ಪ ಸಿ. ಗೌಡ ಮಾತನಾಡಿ, ಜಯ ಸಿ. ಸುವರ್ಣರಂತಹ ಮಹನೀಯರ ಆಶೀರ್ವಾದ ಹಾಗೂ ಬ್ಯಾಂಕ್ ಮೇಲಿನ ನಂಬಿಕೆಯಿಂದಾಗಿ ಹಲವು ಸಂಸ್ಥೆಗಳು ಮತ್ತು ಕುಟುಂಬಗಳು ಬೆಳೆಯಲು ಸಾಧ್ಯವಾಯಿತು ಎಂದು ಸ್ಮರಿಸಿದರು. ವೈದ್ಯ ಡಾ. ಪ್ರವೀಣ್ ಪೂಜಾರಿ ಸಮಾಜದ ಬೆಳವಣಿಗೆಯನ್ನು ಪ್ರಶಂಸಿಸಿ ಆರೋಗ್ಯ ರಕ್ಷಣೆಯ ಬಗ್ಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಉದ್ಯಮಿ ಯಶವಂತ್ ಪೂಜಾರಿ, ದಹಿಸರ್ನ ಶನೇಶ್ವರ ಚಾಮುಂಡೇಶ್ವರಿ ಮಂದಿರದ ಸ್ಥಾಪಕ ಮುಕ್ತೇಸರ ಚೆನ್ನಪ್ಪ ವಿ. ಪೂಜಾರಿ, ಬೋರಿವಲಿ ಪೂರ್ವ ಮಾಗಠಾಣೆಯ ಮಾಜಿ ಕಾರ್ಪೊರೇಟರ್ ನ್ಯಾಯವಾದಿ ಸೀಮಾ ಶಿಂಧೆ ಉಪಸ್ಥಿತರಿದ್ದರು.
ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಅಧ್ಯಕ್ಷ ಅಶೋಕ್ ಕುಕ್ಯಾನ್ ಸಸಿಹಿತ್ಲು, ಉಪಾಧ್ಯಕ್ಷ ಸದಾಶಿವ್ ಎ. ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಕೇಶವ್ ಎಸ್. ಪೂಜಾರಿ, ಗೌರವ ಕೋಶಾಧಿಕಾರಿ ಸಬಿತಾ ಜಿ. ಪೂಜಾರಿ, ಬೋರಿವಲಿ–ದಹಿಸರ್ ಮಂಡಳಿಯ ಗೌರವ ಕಾರ್ಯಾಧ್ಯಕ್ಷ ಸುಂದರ್ ಡಿ. ಪೂಜಾರಿ, ಗೌರವ ಕಾರ್ಯದರ್ಶಿ ಆಶೀಷ್ ಆರ್. ಕೋಟ್ಯಾನ್, ಗೌರವ ಕೋಶಾಧಿಕಾರಿ ವಿಶ್ವನಾಥ್ ಬಿ. ಬಂಗೇರ, ಜಯ ಸಿ. ಸುವರ್ಣ ಅಭಿಮಾನಿಗಳ ಬಳಗದ ಗೌರವ ಕಾರ್ಯದರ್ಶಿ ಮೋಹನ್ದಾಸ್ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ಶಿವರಾಮ್ ಎಸ್. ಪೂಜಾರಿ ಭಾಗವಹಿಸಿದ್ದರು.

ವಿಶೇಷ ಆಹ್ವಾನಿತರಾಗಿ ಭಾರತ್ ಬ್ಯಾಂಕ್ ನಿರ್ದೇಶಕರಾದ ಭಾಸ್ಕರ್ ಎಂ. ಸಾಲ್ಯಾನ್, ಗಂಗಾಧರ್ ಜೆ. ಪೂಜಾರಿ, ಗಣೇಶ್ ಡಿ. ಪೂಜಾರಿ, ಸಂತೋಷ್ ಪೂಜಾರಿ, ನರೇಶ್ ಪೂಜಾರಿ, ಜನರಲ್ ಮ್ಯಾನೇಜರ್ ಜನಾರ್ಧನ್ ಪೂಜಾರಿ, ನ್ಯಾಯವಾದಿ ನವೀನ್ ಪೂಜಾರಿ ಹಾಗೂ ಉದ್ಯಮಿ ವಿಠ್ಠಲ್ ಪೂಜಾರಿ ಉಪಸ್ಥಿತರಿದ್ದರು.
ಸುಂದರ್ ಪೂಜಾರಿ, ಲಕ್ಷ್ಮಣ್ ಸಾಲ್ಯಾನ್, ಜೈರಾಮ್ ಯು. ಪೂಜಾರಿ, ಶೈಲೇಶ್ ಹೆಜ್ಮಾಡಿ, ದಯಾನಂದ್ ಪೂಜಾರಿ ವಾರಂಗ, ಸದಾಶಿವ್ ಸಾಲ್ಯಾನ್ ಹಾಗೂ ಸುವರ್ಣ ಸೇವಾ ಸೇತುವಿನ ಪದಾಧಿಕಾರಿಗಳು ಕಾರ್ಯಕ್ರಮ ಸಂಘಟಿಸಿದರು. ಶಶಿಧರ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಮಂಡಳಿಯ ಉಪಕಾರ್ಯಾಧ್ಯಕ್ಷ ಕರುಣಾಕರ್ ಕಾಪು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನೆರವೇರಿತು.




