
ಕಲಿಗಾಲದಲ್ಲಿ ಭಗವಂತನ ಅನುಸಂಧಾನಕ್ಕೆ ಸುಲಭ ಮಾರ್ಗ ನಾಮಸಂಕೀರ್ತನೆ: ಒಡಿಯೂರು ಶ್ರೀ
ಚಿತ್ರ-ವರದಿ: ದಿನೇಶ್ ಕುಲಾಲ್
ಮುಂಬಯಿ: “ಭಜನೆ ನಡೆಯುವಲ್ಲಿ ಯಾವುದೇ ದುಷ್ಟಶಕ್ತಿಗಳ ಬಾಧೆ ಇರುವುದಿಲ್ಲ, ಬದಲಿಗೆ ಗುಣಾತ್ಮಕ ಶಕ್ತಿ ಸಂಚಯನವಾಗುತ್ತದೆ. ಮಹಾಲಕ್ಷ್ಮಿ ಚಲನಶೀಲ, ಅದೇ ರೀತಿ ಧರ್ಮವೂ ಚಲನಶೀಲ. ವಾಕ್ ಎಂದರೆ ಮಾತಿನ ಹೃದಯ ಸತ್ಯವಾಗಿರಬೇಕು. ಮಹಾರಾಷ್ಟ್ರದಲ್ಲಿ ಗುರುತಿಸಲ್ಪಡುವ ಭಜನಾ ಮಂಡಳಿ ಇದ್ದರೆ ಅದು ಅಂಧೇರಿಯ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ. ಭಜನೆಯ ಮೂಲಕ ಇವರಿಂದ ಧರ್ಮಜಾಗೃತಿ ನಡೆಯುತ್ತಿದ್ದು, ಕಲಿಗಾಲದಲ್ಲಿ ಭಗವಂತನ ಅನುಸಂಧಾನಕ್ಕೆ ನಾಮಸಂಕೀರ್ತನೆಯೇ ಸುಲಭ ಮಾರ್ಗ,” ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಂದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಜುಲೈ 30ರಂದು ಅಂಧೇರಿ ಪಶ್ಚಿಮದ ವೀರ ದೇಸಾಯಿ ಮಾರ್ಗದ ಶ್ರೀ ಮಹಾಲಕ್ಷ್ಮೀ ಕಾಲನಿಯ ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿಗೆ ಭೇಟಿ ನೀಡಿ ಭಕ್ತರನ್ನು ಹರಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, “ನಮ್ಮ ಜೀವನ ನಮ್ಮ ಕೈಯಲ್ಲಿದೆ. ಭಜನಾ ಮಂಡಳಿಯು ಜೀವನಪಾಠವನ್ನು ಕಲಿಸುವ ಕಾರ್ಯ ಮಾಡುತ್ತಿದೆ. ಮೊಗವೀರ ಸಮುದಾಯದ ಬಂಧುಗಳೆಂದರೆ ಒಗ್ಗಟ್ಟು ಮತ್ತು ಧೈರ್ಯಕ್ಕೆ ಹೆಸರಾದವರು. ಈ ಪರಿಸರದಲ್ಲಿ ಮೊಗವೀರ ಸಮಾಜದ ಬಂಧುಗಳು ಒಗ್ಗಟ್ಟಾಗಿ ಸಮುದಾಯವನ್ನು ಹಾಗೂ ಧರ್ಮವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕ್ಷೇತ್ರದ ಹಿರಿಯರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಧರ್ಮ ಕಾರ್ಯಗಳನ್ನು ನಡೆಸುತ್ತಾ ಬಂದವರು. ಹಾಗಾಗಿ ಇಂದು ಈ ಕ್ಷೇತ್ರದಲ್ಲಿ ಮಕ್ಕಳು ಭಜನೆ-ಸಂಕೀರ್ತನೆಗಳ ಮೂಲಕ ಯುವ ಸಮುದಾಯವನ್ನು ಆಧ್ಯಾತ್ಮದತ್ತ ನಡೆಸುತ್ತಿದ್ದಾರೆ,” ಎಂದರು.
ಪ್ರಾರಂಭದಲ್ಲಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ಸದಸ್ಯರು ಹಾಗೂ ಮಕ್ಕಳು ಸೇರಿ ಹರಿನಾಮ ಸಂಕೀರ್ತನೆ ಗೈದರು. ಈ ನಡುವೆ ಶ್ರೀ ಒಡಿಯೂರು ಸ್ವಾಮೀಜಿ ಆಗಮಿಸಿದಾಗ ಅವರನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಸ್ವಾಮೀಜಿಯವರು ಶ್ರೀ ಮಹಾಲಕ್ಷ್ಮೀ ದೇವರಿಗೆ ಆರತಿ ಬೆಳಗಿದರು. ಬಳಿಕ ಮಂಡಳಿಯ ಸಹಾಯಕ ಕಾರ್ಯದರ್ಶಿ ನಾಗೇಶ್ ಪುತ್ರನ್ ದಂಪತಿಗಳು ಗುರುಗಳ ಪಾದಪೂಜೆ ನೆರವೇರಿಸಿದರು. ನಂತರ ಸ್ವಾಮೀಜಿಯವರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ಕಾಲನಿ, ಚಿನ್ಮಯ ಮಿಷನ್, ನವರಾತ್ರಿ ಸಂಘ, ಮೊಗವೀರ ವ್ಯವಸ್ಥಾಪಕ ಮಂಡಳಿ, ಶ್ರೀಮದ್ಭಾರತ ಮಂಡಳಿ, ಗುರುದೇವ ಸೇವಾ ಬಳಗ, ವಜ್ರಮಾತಾ ಸೇವಾ ಬಳಗ, ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿಯ ಟ್ರಸ್ಟಿಗಳು ಹಾಗೂ ಪದಾಧಿಕಾರಿಗಳು ಗುರುಗಳನ್ನು ಗೌರವಿಸಿದರು. ಸಾಧ್ವಿ ಮಾತಾನಂದಮಯಿ ಅವರನ್ನು ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿಯ ಮಹಿಳಾ ಸದಸ್ಯರು ಗೌರವಿಸಿದರು. ಸಾಧ್ವಿ ಮಾತಾನಂದಮಯಿ ಅವರು ಪ್ರಾರ್ಥನೆ ನೆರವೇರಿಸಿದರು.
ಹೋಟೆಲ್ ಉದ್ಯಮಿ ಹಾಗೂ ಜವಾಬ್ ಸಂಸ್ಥೆಯ ಮಾಜಿ ಅಧ್ಯಕ್ಷ ರಘು ಎಲ್. ಶೆಟ್ಟಿ ಮತ್ತು ಅವರ ಪುತ್ರಿಯನ್ನು ಸ್ವಾಮೀಜಿಯವರು ಗೌರವಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ಟ್ರಸ್ಟಿಗಳಾದ ಚಂದ್ರಶೇಖರ್ ಆರ್. ಸಾಲಿಯಾನ್, ದಯಾನಂದ್ ಎಲ್. ಬಂಗೇರ, ವೇದಾವತಿ ಎಂ. ಮೆಂಡನ್, ಪ್ರಫುಲ್ ಚಂದ್ರ ಬಿ. ಶ್ರಿಯಾನ್, ಅಧ್ಯಕ್ಷರಾದ ಪದ್ಮನಾಭ ಎನ್. ಕಾಂಚನ್, ಉಪಾಧ್ಯಕ್ಷರಾದ ಶ್ರೀಮತಿ ದಮಯಂತಿ ಬಂಗೇರ, ಕೋಶಾಧಿಕಾರಿ ರೇಖಾ ಎಸ್. ಕರ್ಕೇರ, ಸಹಾಯಕ ಕೋಶಾಧಿಕಾರಿ ಪ್ರತಿಭಾ ಎಚ್. ಸಾಲಿಯಾನ್, ಕಾರ್ಯದರ್ಶಿ ದಯಾವತಿ ಸುವರ್ಣ, ಸಹಾಯಕ ಕಾರ್ಯದರ್ಶಿ ನಾಗೇಶ್ ಪುತ್ರನ್, ಅರ್ಚಕರಾದ ಮನೋಜ್ ಮೆಂಡನ್ ಹಾಗೂ ಭಜನಾ ಮಂಡಳಿಯ ಸಮಿತಿ ಸದಸ್ಯರುಗಳಾದ ನಾಗೇಶ್ ಎಸ್. ಕೋಟ್ಯಾನ್ ಪೊಲಿಪು, ಏಕನಾಥ್ ಕರ್ಕೇರ ಉಪಸ್ಥಿತರಿದ್ದು ಸಹಕರಿಸಿದರು.
ಕಾರ್ಯಕ್ರಮವನ್ನು ದಯಾವತಿ ಸುವರ್ಣ ನಿರೂಪಿಸಿದರು. ಶ್ರೀ ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಣೆಯಲ್ಲಿ ಸಹಕರಿಸಿದರು. ಮಂಡಳಿಯ ಅರ್ಚಕರಾದ ಮನೋಜ್ ಮೆಂಡನ್ ದೇವರಿಗೆ ಮಹಾಪೂಜೆ/ಆರತಿ ನೆರವೇರಿಸಿದರು.




