
ದೇಶದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು (ಜೂನ್ 13) ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು. ಕ್ಷೇತ್ರಕ್ಕೆ ಆಗಮಿಸಿದ ಸಚಿವರನ್ನು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅರ್ಚಕರು ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು.
ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ವಿತ್ತ ಸಚಿವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಬಳಿಕ, ಸಚಿವರಿಗೆ ದೇವರ ಪವಿತ್ರ ಪ್ರಸಾದವನ್ನು ನೀಡಿ ಮಂತ್ರಾಕ್ಷತೆ ಆಶೀರ್ವಾದದೊಂದಿಗೆ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಹಾಗೂ ಕ್ಷೇತ್ರಾಡಳಿತ ಸಮಿತಿಯ ಪರವಾಗಿ ಕೇಂದ್ರ ಸಚಿವರನ್ನು ಅತ್ಯಂತ ಗೌರವದಿಂದ ಸನ್ಮಾನಿಸಲಾಯಿತು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ಮತ್ತು ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಗಿರಿಧರ್ ಸುವರ್ಣ ಅವರು ಸಚಿವರ ದೇಶಸೇವೆಯನ್ನು ಶ್ಲಾಘಿಸಿ, ಮಹಾಜನ ಸಂಘ ಮತ್ತು ಸಮಿತಿಯ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಿದರು.






ವಿತ್ತ ಸಚಿವರ ಈ ಅಪರೂಪದ ಭೇಟಿಯ ಸವಿನೆನಪನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ, ದೇವಸ್ಥಾನದ ಆವರಣದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುವ ಬಿಲ್ವಪತ್ರೆಯ ಗಿಡವನ್ನು ಸಚಿವರ ಹಸ್ತದಿಂದ ನೆಡಲಾಯಿತು.
ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಸುರೇಶ್ ಶೆಟ್ಟಿ ಗುರ್ಮೆ, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಗುರುರಾಜ್ ಗಂಟಿಹೊಳಿ , ಡಾ. ಧನಂಜಯ ಸರ್ಜಿ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಬಿಜೆಪಿ ಜಿಲ್ಲಾದ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ವಿಭಾಗ ಪ್ರಭಾರಿ ಉದಯ ಕುಮಾರ ಶೆಟ್ಟಿ, ಮಾಜಿ ಅಧ್ಯಕ್ಷ ಕೊಯಿಲಾಡಿ ಸುರೇಶ್ ನಾಯಕ್, ಮಟ್ಟಾರು ರತ್ನಾಕರ ಹೆಗ್ಡೆ ಮತ್ತು ಪದಾಧಿಕಾರಿಗಳು, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಪ್ರಮುಖರಾದ ನಾರಾಯಣ ಕರ್ಕೆರ, ದಿನೇಶ್ ಎರ್ಮಾಳು, ಮೋಹನ್ ಬಂಗೇರ, ಸತೀಶ್ ಸಾಲ್ಯಾನ್, ವಿ ಕೆ ಯಾದವ್, ಸತೀಶ್ ಕಿದಿಯೂರು, ಮನೋಜ್ ಕಾಂಚನ್, ಸತೀಶ್ ಅಮೀನ್ ಪಡುಕೆರೆ ಮತ್ತಿತರರು ಉಪಸ್ಥಿತರಿದ್ದರು.




