28.4 C
Mumbai
July 30, 2026
Mumbai News Kannada
ಮುಂಬಯಿ

ಸಿರಿನಾಡ ವೆಲ್ಫೇರ್ ಅಸೋಸಿಯೇಷನ್‌ ರಜತ ಮಹೋತ್ಸವ: ‘ಆಟಿಡ್ ಒಂಜಿ ದಿನ’ ಹಾಗೂ ಯಕ್ಷಗಾನ ತಾಳಮದ್ದಳೆ







ಚಿತ್ರ, ಮಾಹಿತಿ: ಗುರುರಾಜ್ ಪೊಟ್ನಿಸ್

ಡೊಂಬಿವಲಿ (ಮುಂಬೈ):
ಮುಂಬೈ ಉಪನಗರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಸಂಸ್ಥೆಯ ರಜತ ಮಹೋತ್ಸವ ವರ್ಷದ ಅಂಗವಾಗಿ, ಸಂಸ್ಥೆಯ ಮಹಿಳಾ ವಿಭಾಗದ ವತಿಯಿಂದ ಡೊಂಬಿವಲಿ ಪಶ್ಚಿಮದ ಪ್ರೀತಿ ಬ್ಯಾಂಕ್ವೇಟ್ ಸಭಾಂಗಣದಲ್ಲಿ ಜುಲೈ 25 ರಂದು ವೈಶಿಷ್ಟ್ಯಪೂರ್ಣ “ಆಟಿಡ್ ಒಂಜಿ ದಿನ” ಹಾಗೂ ‘ಅಂಬಾ ಶಪಥ’ ತುಳು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಉದ್ಘಾಟನೆಯನ್ನು ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ನೆರವೇರಿಸಿ ಮಾತನಾಡಿ, “ಬದುಕು ಅರಸಿ ಜಗತ್ತಿನ ಮೂಲೆಗೆ ತೆರಳಿದರೂ ತುಳು-ಕನ್ನಡಿಗರು ತಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಾದರಿಯಾಗಿದ್ದಾರೆ. ಎರಡೂವರೆ ದಶಕಗಳ ಹಿಂದೆ ಆರಂಭವಾದ ಈ ಸಂಸ್ಥೆ ಇಂದು ರಜತ ಮಹೋತ್ಸವದ ಸಡಗರದಲ್ಲಿದ್ದು, ಮುಂದೆಯೂ ಸಾಂಸ್ಕೃತಿಕ ರಾಯಭಾರಿಯಾಗಿ ಬೆಳೆಯಲಿ,” ಎಂದು ಶುಭ ಹಾರೈಸಿದರು.

ತುಳುನಾಡಿನ ಸನಾತನ ಸಂಸ್ಕೃತಿ ಜಗತ್ತಿನಾದ್ಯಂತ ಪಸರಿಸಿದೆ: ಚಿತ್ರಾ ಆರ್. ಶೆಟ್ಟಿ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮುಂಬೈ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಚಿತ್ರಾ ಆರ್. ಶೆಟ್ಟಿ, ತುಳುನಾಡಿನ ವಿಶಿಷ್ಟ ಆಚರಣೆಗಳ ಮಹತ್ವವನ್ನು ಎತ್ತಿಹಿಡಿದರು.

“ವರ್ಷದ ಒಂದು ತಿಂಗಳ ಕಾಲ ಆಚರಿಸಲ್ಪಡುವ ‘ಆಟಿಡ್ ಒಂಜಿ ದಿನ’ ಕಾರ್ಯಕ್ರಮವು ನಮ್ಮ ನೋವು-ನಲಿವುಗಳ ಮಧ್ಯೆ ಸಂಭ್ರಮಿಸುವ ಅಪರೂಪದ ದಿನ. ಕೇವಲ ತುಳುನಾಡಿಗೆ ಸೀಮಿತವಾಗಿದ್ದ ನಮ್ಮ ಧಾರ್ಮಿಕ ಪರಂಪರೆಯ ಪ್ರತೀಕವಾದ ಈ ಕಾರ್ಯಕ್ರಮವನ್ನು ಇಂದು ಇಡೀ ವಿಶ್ವದ ಮೂಲೆಮೂಲೆಯಲ್ಲಿ ಪಸರಿಸಿರುವ ತುಳು-ಕನ್ನಡಿಗರು ವಿವಿಧ ಸಂಘಟನೆಗಳ ಮೂಲಕ ಸಡಗರದಿಂದ ಆಚರಿಸುತ್ತಿದ್ದಾರೆ. ಈ ಮೂಲಕ ನಮ್ಮ ಸನಾತನ ಧರ್ಮ, ಸಂಸ್ಕೃತಿ ಹಾಗೂ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಅಭಿನಂದನೀಯ ಹಾಗೂ ಅನುಕರಣೀಯ,” ಎಂದು ಬಣ್ಣಿಸಿದರು.

ಅಲ್ಲದೆ, ರಜತ ಮಹೋತ್ಸವದ ಸಂಭ್ರಮದಲ್ಲಿರುವ ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಸಂಸ್ಥೆಯು ತನ್ನ ಅಪ್ರತಿಮ ಕಾರ್ಯವೈಖರಿಯಿಂದ ಗಮನ ಸೆಳೆಯುತ್ತಿದ್ದು, ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿ ಗೌರವಿಸಿದ್ದಕ್ಕೆ ಹೃದಯಾಂತರಾಳದ ಕೃತಜ್ಞತೆಗಳನ್ನು ಸಲ್ಲಿಸಿ ಸಂಸ್ಥೆಗೆ ಶುಭ ಕೋರಿದರು.

ಸಂಸ್ಕೃತಿಯ ಉಳಿವಿನ ಜೊತೆಗೆ ಆರೋಗ್ಯಕರ ಬದುಕು ಅಗತ್ಯ

ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸೇವಾ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ ಸೂರಿಂಜೆ ಮಾತನಾಡಿ, “ಆಟಿ ತಿಂಗಳ ಮಹತ್ವವನ್ನು ಅರಿತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಆರೋಗ್ಯಶಾಲಿ ಬದುಕನ್ನು ಸಾಗಿಸಬೇಕು,” ಎಂದು ಕರೆ ನೀಡಿದರು. ಇದೇ ವೇಳೆ ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಲದ ಧರ್ಮದರ್ಶಿ ಅಶೋಕ ದಾಸೂ ಶೆಟ್ಟಿ ಅವರ ಸಾರಥ್ಯದಲ್ಲಿ ಮಹಿಳಾ ವಿಭಾಗದ ಸದಸ್ಯೆಯರು ಪ್ರಸ್ತುತಪಡಿಸಿದ ‘ಅಂಬಾ ಶಪಥ’ ತುಳು ಯಕ್ಷಗಾನ ತಾಳಮದ್ದಳೆ ಪ್ರದರ್ಶನವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.


ಇನ್ನೋರ್ವ ಅತಿಥಿ, ಕಲ್ಯಾಣ್, ಭಿವಂಡಿ, ಬದ್ಲಾಪುರ ಹಾಗೂ ಅಂಬರನಾಥ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ ಅರುಣ್ ಶೆಟ್ಟಿ ಮಾತನಾಡಿ, “ಆಧುನಿಕತೆಯ ಭರಾಟೆಯಲ್ಲಿ ನಮ್ಮ ಪೂರ್ವಜರ ಜೀವನಶೈಲಿಯನ್ನು ಅಳವಡಿಸಿಕೊಂಡು ಆರೋಗ್ಯದಾಯಿ ಬದುಕು ಸಾಗಿಸುವುದು ಅಗತ್ಯ,” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಆರ್. ಕೆ. ಸುವರ್ಣ ಅವರು ಮಾತನಾಡಿ, ಕಳೆದ ಎರಡೂವರೆ ದಶಕಗಳಿಂದ ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಶ್ರಮಿಸುತ್ತಿರುವ ಸಂಸ್ಥೆಗೆ ಸಾರ್ವಜನಿಕರ ಸಹಕಾರ ಹೀಗೆಯೇ ಇರಲಿ ಎಂದು ಆಶಿಸಿದರು.

ರಜತ ಮಹೋತ್ಸವ ವರ್ಷದ ಅಂಗವಾಗಿ ಸಂಸ್ಥೆಯ ಏಳಿಗೆಗೆ ಶ್ರಮಿಸಿದ ಪ್ರಮುಖರಾದ ಸಂಸ್ಥೆಯ ಅಧ್ಯಕ್ಷ ಆರ್. ಕೆ. ಸುವರ್ಣ, ಸಲಹೆಗಾರರಾದ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ಹಾಗೂ ಶ್ರೀಮತಿ ಸುಷ್ಮಾ ಡಿ. ಶೆಟ್ಟಿ ದಂಪತಿ, ರಾಜೀವ ಭಂಡಾರಿ, ವಸಂತ ಸುವರ್ಣ ಹಾಗೂ ಪ್ರೀತಿ ಬ್ಯಾಂಕ್ವೇಟ್ ಮಾಲಿಕ ಲಕ್ಷ್ಮಣ ಪೂಜಾರಿ ಅವರನ್ನು ಶಾಲು, ಶ್ರೀಫಲ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ಮಹಿಳಾ ಪ್ರತಿನಿಧಿಗಳಿಗೂ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.


ಕು. ಪ್ರಶಿ ಶೆಟ್ಟಿ ಅವರ ಸ್ವಾಗತ ನೃತ್ಯ, ಕು. ವಿನಿಷಾ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ಕು. ವಿನಿಷಾ ಶೆಟ್ಟಿ ಹಾಗೂ ಶಬರೀಶ್ ಹೆಜ್ಮಾಡಿ ಅವರ ‘ಆಟಿ ಕಳಂಜನ’ ಪ್ರಾತ್ಯಕ್ಷಿಕೆಯು ನೆರೆದಿದ್ದ ಸಭಾಜನರ ಗಮನ ಸೆಳೆಯಿತು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಉದಯಾ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಫುಲ್ಲ ದಿನೇಶ ಶೆಟ್ಟಿ, ದಿವ್ಯಾ ಶೆಟ್ಟಿ, ಮಾಲತಿ ಕುಂದರ್ ಹಾಗೂ ಮೈನಾ ಶೆಟ್ಟಿ ಗಣ್ಯರನ್ನು ಪರಿಚಯಿಸಿದರು. ವೇದಿಕೆಯಲ್ಲಿ ಆರ್. ಕೆ. ಸುವರ್ಣ, ಡಾ. ದಿವಾಕರ ಶೆಟ್ಟಿ ಇಂದ್ರಾಳಿ, ಶ್ರೀಮತಿ ಚಿತ್ರಾ ಆರ್. ಶೆಟ್ಟಿ, ಸುಬ್ಬಯ್ಯ ಎ. ಶೆಟ್ಟಿ ಸೂರಿಂಜೆ, ಶ್ರೀಮತಿ ಶೋಭಾ ಅರುಣ್ ಶೆಟ್ಟಿ, ರಾಜೀವ ಭಂಡಾರಿ, ಶ್ರೀಮತಿ ಉದಯಾ ಶೆಟ್ಟಿ, ಪ್ರಫುಲ್ಲ ದಿನೇಶ ಶೆಟ್ಟಿ ಹಾಗೂ ವಸಂತ ಸುವರ್ಣ ಉಪಸ್ಥಿತರಿದ್ದರು. ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



Related posts

ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಅಭಿನಂದನಾ ಸಭೆ

Mumbai News Desk

ಬಂಟ್ಸ್ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ,

Mumbai News Desk

ಭಾಯಂದರ್ ಸೈಂಟ್ ಆಗ್ನೆಸ್ ಇಂಗ್ಲಿಷ್ ಹೈಸ್ಕೂಲ್‌ನ 19ನೇ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಗೋರೆಗಾಂವ್ ಪೂರ್ವ  ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ವಜ್ರ ಮಹೋತ್ಸವ, 

Mumbai News Desk

PVSNM ಮಹಿಳಾ ವಿಭಾಗದ ಹಳದಿ ಕುಂಕುಮ.

Mumbai News Desk

ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಡೊಂಬಿವಲಿ ಇದರ 10ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk